ಮನೆಗೆಲಸ ಮಾಡುವ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಬಾಂಬೆ ಲೇಡಿ ಗ್ಯಾಂಗ್ ಅರೆಸ್ಟ್!

ಬೆಂಗಳೂರು : ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಜಾಹೀರಾತು ನೀಡಿ ಸಂಪರ್ಕಿಸುತ್ತಿದ್ದ ಮಾಲೀಕರ ಮನೆಗಳಲ್ಲಿ ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲಿ ಮಾಲೀಕರು ಇಲ್ಲದಿರುವ ಸಮಯ ನೋಡಿ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಬಾಂಬೆ ಲೇಡಿ ಗ್ಯಾಂಗ್ ನ್ನ ಹೆಣ್ಣೂರು ಪೊಲೀಸರು ಹೆಡೆಮುರಿಕಟ್ಟಿದೆ.
ಮಹಾರಾಷ್ಟ್ರ ಮೂಲದ ವನಿತಾ, ಮಹಾದೇವಿ ಹಾಗೂ ಪ್ರಿಯಾಂಕ ಬಂಧಿತ ಕಳ್ಳಿಯರಾಗಿದ್ದು ಇವರಿಂದ 250 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಜಪ್ತಿ ಮಾಡಿಕೊಳ್ಳಲಾಗಿದ್ದು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಮೂಲದ ಕಳ್ಳಿಯರು ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 37 ಪ್ರಕರಣ ದಾಖಲಾಗಿದ್ದು ಜೈಲಿಗೂ ಹೋಗಿ ಜಾಮೀನಿನ ಮೇರೆಗೆ ಬಿಡುಗಡೆಗೊಂಡು ಮತ್ತೆ ಹಳೆ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
ಕಳೆದ ತಿಂಗಳು ನಗರಕ್ಕೆ ಬಂದಿದ್ದ ಮಹಿಳೆಯರು ಫೇಸ್ ಬುಕ್ ವೊಂದರ ರೆಫರ್ ಹೌಸ್ ಮೇಡ್ಸ್ ಬೆಂಗಳೂರು ಪಬ್ಲಿಕ್ ಗ್ರೂಪ್ ನಲ್ಲಿ ಸುಬ್ಬಲಕ್ಷಿ ಹೆಸರಿನಲ್ಲಿ ಮೊಬೈಲ್ ನಂಬರ್ ಹಾಕಿ ಮನೆಗೆಲಸಕ್ಕೆ ಲಭ್ಯವಿರುವುದಾಗಿ ಆರೋಪಿಗಳ ಪೈಕಿ ಮಹಾದೇವಿ ಪೋಸ್ಟ್ ಹಾಕಿದ್ದಳು.
ಇದನ್ನು ನೋಡಿ ಹೆಣ್ಣೂರಿನ ಅರವಿಂದ್ ಎಂಬುವರು ಸಂಪರ್ಕಿಸಿದ್ದರು. ಇದರಂತೆ ಮೂರು ದಿನಗಳ ಕೆಲಸ ಮಾಡಿ ಬಳಿಕ ಮನೆಯಲ್ಲಿ ಯಾರು ಇಲ್ಲದಿರುವ ಸಮಯ ನೋಡಿ ಮನೆಯಲ್ಲಿದ್ದ ಚಿನ್ನಾಭರಣ ಲಪಾಟಿಯಿಸಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ವಸಂತ್ ಕುಮಾರ್ ತಂಡ ಸೆರೆಯಾದ ಸಿಸಿಟಿವಿ ಹಾಗೂ ಮೊಬೈಲ್ ನಂಬರ್ ಆಧಾರದ ಮೇರೆಗೆ ಮುಂಬೈನಲ್ಲಿ ಖತರ್ ನಾಕ್ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಚಾರಣೆ ವೇಳೆ ಫೇಸ್ ಬುಕ್ ನ ಗ್ರೂಪ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವಳು ಎಂದು ಮಹಾದೇವಿ ನಕಲಿ ಆಧಾರ್ ಕಾರ್ಡ್ ಮಾಡಿಸಿರುವುದು ತಿಳಿದುಬಂದಿದೆ.
ಪೋಸ್ಟ್ ನಲ್ಲಿ ಹಾಕಿದ್ದ ನಂಬರ್ ಕದ್ದ ಮೊಬೈಲ್ ನಂಬರ್ ಆಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.ಮೊದಲಿಗೆ ಫೇಸ್ ಬುಕ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದ ಇವರು ನಂತರ ಗ್ರೂಪ್ ಒಂದನ್ನು ಕ್ರಿಯೆಟ್ ಮಾಡಿಕೊಂಡು ಮನೆಕೆಲಸದವರು ಬೇಕಾದರೆ ಸಂಪರ್ಕಿಸಿ ಅಂತ ಹೇಳುತ್ತಿದ್ದರು.
ನಂತರ ಮನೆಕೆಲಸಕ್ಕೆ ಸೇರಿ ಅದೇ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರು. ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿ ಎಸ್ಕೇಪ್ ಅಗಿದ್ದ ಈ ಗ್ಯಾಂಗ್, ಈ ಹಿಂದೆ ಬಾಂಬೆಯಲ್ಲಿ ಹಲವು ಕಡೆ ಕೈ ಚಳಕ ತೋರಿ ಅಂದರ್ ಅಗಿದ್ದರು.
ಮನೆ ಕೆಲಸದವರಿಂದ ಕಳ್ಳತನವಾಯ್ತು ಅಂದ್ರೆ ಮುಂಬೈ ಪೊಲೀಸರು ಮೊದಲು ಹುಡುಕುತ್ತಿದ್ದದ್ದು ಇವರನ್ನೆ ಅಂತ ಹೇಳಲಾಗ್ತಿದೆ.. ಮುಂಬೈ ಒಂದರಲ್ಲಿಯೇ ಸುಮಾರು 37 ಪ್ರಕರಣ ಇವರ ಮೇಲಿದೆ.ಮುಂಬೈಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಿಗೆ ಕಮೀಷನ್ ಕೊಟ್ಟು ಮನೆಕೆಲಸಕ್ಕೆ ಸೇರುತ್ತಿದ್ದ ಗ್ಯಾಂಗ್ ಇಲ್ಲಿಯು ಸಹ ಅದೇ ಚಾಳಿಯನ್ನು ಮುಂದುವರೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.