
ಬಾಗಿಲು ಮುಂಭಾಗ ದಿನ ಪತ್ರಿಕೆಗಳು ಮತ್ತು ಕಸ ಬಿದ್ದಿರುವುದನ್ನು ಗಮನಿಸಿ ಹಗಲು ಮತ್ತು ರಾತ್ರಿ ವೇಳೆ ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 15.95 ಲಕ್ಷ ಮೌಲ್ಯದ ಚಿನ್ನಾಭರಣಗಳು, ಕಾರು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆನೆಕಲ್ ತಾಲೂಕು ಚಂದಾಪುರದ ಸೂರ್ಯ ಸಿಟಿ ನಿವಾಸಿ ಗಣೇಶ ಅಲಿಯಾಸ್ ಟಚ್ಚು ಅಲಿಯಾಸ್ ವಿನಯ ಪ್ರಸಾದ್ ಅಲಿಯಾಸ್ ವಿಜಿ(23), ಚಿಕ್ಕಬಾಣವಾರದ ಲೋಹಿತ್(37), ನಾಯಂಡನಹಳ್ಳಿಯ ಗಂಗೊಂಡನಹಳ್ಳಿ ನಿವಾಸಿ ಶೇಖ್ ಸಲ್ಮಾನ್ ಅಲಿಯಾಸ್ ಬೋಡ್ಕಾ(26) ಮತ್ತು ಶೇಖ್ ಇಸ್ಮಾಯಿಲ್(33) ಬಂಧಿತ ಆರೋಪಿಗಳು.
ಆರೋಪಿಗಳಿಂದ ಒಟ್ಟು 15.95 ಲಕ್ಷ ರೂ. ಬೆಲೆಬಾಳುವ 216.5 ಗ್ರಾಂ ತೂಕದ ಚಿನ್ನಾಭರಣಗಳು, 3019.28 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳು, ದುಬಾರಿ ಬೆಲೆಯ 4 ವಾಚ್‍ಗಳು, ಒಂದು ಟಿವಿ ಮತ್ತು ಒಂದು ಮಾರುತಿ ಎಸ್ಟೀಮ್ ಕಾರು ಪತ್ತೆಯಾಗಿರುತ್ತದೆ.
ಆರೋಪಿಗಳ ಬಂಧನದಿಂದ ಕೋಣನಕುಂಟೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳು, ವಿದ್ಯಾರಣ್ಯಪುರ, ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿ ಒಟ್ಟು 7 ಮನೆಗಳ ಕನ್ನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಕಳೆದ ನ. 14ರಂದು ದಿನೇಶ್ ಎಂಬುವರು ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಚೆನ್ನೈಗೆ ಹೋಗಿದ್ದು, ನ. 17ರಂದು ರಾತ್ರಿ 9 ಗಂಟೆಗೆ ಮನೆಗೆ ವಾಪಸ್ ಆದಾಗ ಮನೆಯ ಬಾಗಿಲ ಬೀಗ ಹೊಡೆದಿರುವುದು ಕಂಡು ಬಂದಿದೆ.
ಮನೆ ಒಳಗೆ ಹೋಗಿ ನೋಡಿದಾಗ ದೇವರ ಮನೆಯಲ್ಲಿದ್ದ ಬೆಳ್ಳಿಯ ಸಾಮಾನುಗಳು, ಬೆಡ್‍ರೂಮ್‍ನಲ್ಲಿದ್ದ ಚಿನ್ನದ ಡೈಮಂಡ್ ರಿಂಗ್, ಸ್ಯಾಮ್‍ಸಾಂಗ್ ಟಿವಿ ಕಳ್ಳತನವಾಗಿರುವುದು ಕಂಡು ಬಂದಿದೆ.
ತಕ್ಷಣ ಅವರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದರು.ಆರೋಪಿಗಳ ಪತ್ತೆ ಮಾಡಲು ಹಾಗೂ ಮಾಲನ್ನು ವಶಪಡಿಸಿಕೊಳ್ಳಲು ಒಂದು ವಿಶೇಷ ತಂಡವನ್ನು ರಚಿಸಿದ್ದು,
ಈ ತಂಡ ಕೃತ್ಯ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮೆರಾವನ್ನು ಪರೀಕ್ಷಿಸಿ ಕ್ಯಾಮೆರಾದಲ್ಲಿ ದೊರೆತ ಮಾಹಿತಿ ಸಂಗ್ರಹಿಸಿ ಹಳೆಯ ಕನ್ನಕಳವು ಆರೋಪಿ ಗಣೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿ ಮೇರೆಗೆ ಇನ್ನುಳಿದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳು ಮನೆಯ ಮುಂಭಾಗ ಎರಡು-ಮೂರು ದಿನಗಳಿಂದ ಬಿದ್ದಿರುವ ನ್ಯೂಸ್ ಪೇಪರ್, ಕಸ ಗಮನಿಸಿ ಹಾಗೂ ಬೀಗ ಹಾಕಿರುವ ಮನೆಗಳನ್ನು ನೋಡಿಕೊಂಡು ಮನೆಯಲ್ಲಿ ಯಾರೂ ಇಲ್ಲವೆಂದು ನಿಖರಪಡಿಸಿಕೊಂಡು ಬಾಗಿಲಿನ ಬೀಗ ಹೊಡೆದು ಕಳ್ಳತನ ಮಾಡುತ್ತಿದ್ದುದ್ದು, ವಿಚಾರಣೆಯಿಂದ ಗೊತ್ತಾಗಿದೆ.
ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಮಾರ್ಗದರ್ಶನದಲ್ಲಿ ಸುಬ್ರಮಣ್ಯಪುರ ಉಪವಿಭಾಗದ ಎಸಿಪಿ ಪವನ್ ಅವರ ಉಸ್ತುವಾರಿ ಯಲ್ಲಿ ಇನ್ಸ್‍ಪೆಕ್ಟರ್ ಶಿವಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.