
ಭಾನುವಾರದೊಳಗೆ ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ಭರವಸೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಧ್ಯರಾತ್ರಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ ನಡೆಸಿದರು. ಆಯುಕ್ತರ ಗಡುವಿನ ನಂತರ ಅಧಿಕಾರಿಗಳು ನಗರದೆಲ್ಲೆಡೆ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ಚುರುಕುಗೊಳಿಸಿದ್ದು, ಆಯುಕ್ತರು ತಡರಾತ್ರಿ ನಗರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಗುಂಡಿ ಮುಚ್ಚುವ ಕಾರ್ಯ ವೀಕ್ಷಿಸಿದರು.
ಪಶ್ಚಿಮ ವಲಯ ವ್ಯಾಪ್ತಿಯ ಕಾವೇರಿ ಚಿತ್ರಮಂದಿರ ಜಂಕ್ಷನ್‍ನಿಂದ ಚೌಡಯ್ಯ ರಸ್ತೆಯಲ್ಲಿ ರಸ್ತೆ ಕತ್ತರಿಸುವಿಕೆ ಭಾಗಕ್ಕೆ ಡಾಂಬರೀಕರಣ ಹಾಕುವ ಸ್ಥಳಕ್ಕೆ ತೆರಳಿದ ಆಯುಕ್ತರು ವಾಹನ ಸಂಚಾರಕ್ಕೆ ಯಾವುದೆ ಸಮಸ್ಯೆ ಆಗದಂತೆ ಗುಣಮಟ್ಟದ ಡಾಂಬರೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಾಸರಹಳ್ಳಿ ವಲಯ ಜಾಲಹಳ್ಳಿ ರಸ್ತೆಯಿಂದ ಕಂಠೀರವ ಸ್ಟುಡಿಯೋ ಕಡೆ ಹೋಗುವ ಟಿವಿಎಸ್ ರಸ್ತೆಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದ್ದು, ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿರುವ ಗುಂಡಿಗಳನ್ನು ಆದ್ಯತೆ ಮೇರೆಗೆ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರ್‍ಆರ್‍ನಗರ ವಲಯ ವ್ಯಾಪ್ತಿಯ ಪೀಣ್ಯ ಒಳವರ್ತುಲ ರಸ್ತೆ ಡಾ.ರಾಜ್‍ಕುಮಾರ್ ಸಮಾ ಬಳಿಯ ರಸ್ತೆ ಸಮೀಪ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ ಸಂದರ್ಭದಲ್ಲಿ ನೆಲದಡಿ ಅಳವಡಿಸಿರುವ ಬೆಸ್ಕಾಂ ಹಾಗೂ ಜಲಮಂಡಳಿಯವರ ಒಳಚರಂಡಿ ಕಾರ್ಯ ಅವೈಜ್ಞಾನಿಕವಾಗಿದ್ದು ಇದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ಕುರಿತಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಅವರು ಹೇಳಿದರು.
ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಮಾಡಿರುವ ಒಳಚರಂಡಿಗಳ ಚೇಂಬರ್ ಪಾಯಿಂಟ್‍ಗಳು ರಸ್ತೆ ಮಟ್ಟಕ್ಕಿಂತ ಎತ್ತರಕ್ಕೆ ಎತ್ತರಿಸದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.