ಅಪರಾಧರಾಜ್ಯ

ಮದ್ಯದ ಕಾಟಕ್ಕೆ ತಾಯಂದಿರು ಕಣ್ಣೀರು; ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸಾರಾಯಿ ಜೋರು

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಪ್ರಾಣ ಕಳೆದುಕೊಳ್ಳುವವರ ಸಂಕಟದ ನಡುವೆಯೇ, ಎಲ್ಲೆಂದರಲ್ಲಿ ಮಾರಾಟವಾಗುವ ಅಕ್ರಮ ಮದ್ಯದ ಹಾವಳಿಗೆ ಜಿಲ್ಲೆಯ ತಾಯಂದಿರು ರೋಸಿ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಎಲ್ಲೆಡೆ ಮದ್ಯ ಮಾರಾಟ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದ ಕಿರಾಣಿ ಅಂಗಡಿಗಳಲ್ಲೂ ಮದ್ಯ ಸಿಗುತ್ತವೆ ಎಂಬ ದೂರುಗಳಿವೆ. ಗೋವಾ ಅಕ್ರಮ ಮದ್ಯದ ಜತೆಗೆ ಕಳ್ಳಬಟ್ಟಿ ಸಾರಾಯಿ ಹಾವಳಿಯೂ ಜೋರಾಗುತ್ತಿದೆ.

ಕೆಲವೆಡೆಯಂತೂ ರಾಜ್ಯದ ಮದ್ಯವನ್ನೇ ಖರೀದಿಸಿ ತಂದು ಜನವಸತಿ ಪ್ರದೇಶದಲ್ಲಿ ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದಾರೆ.

ಈಗೀಗ ಜಿಲ್ಲೆಯಲ್ಲಿ ಪ್ರೌಢ ಶಾಲೆ ಹಂತದಲ್ಲಿಯೇ ಬಾಲಕರು ಮದ್ಯ ಸೇವನೆಗೆ ಇಳಿಯುತ್ತಿದ್ದಾರೆ. ಅಬಕಾರಿ, ಪೊಲೀಸ್‌ ಇಲಾಖೆ ದಾಖಲೆಗೂ ವಾಸ್ತವಕ್ಕೂ ಸಂಬಂಧವೇ ಇಲ್ಲದಷ್ಟು ಕೆಟ್ಟದಾಗಿ ಮದ್ಯ ದಂಧೆ ಉತ್ತರ ಕನ್ನಡ ಜಿಲ್ಲೆಯನ್ನು ಆವರಿಸಿಕೊಂಡಿದೆ.

ಇಷ್ಟೊಂದು ನಿಯಂತ್ರಣ ತಪ್ಪಲು ಅಬಕಾರಿ ಇಲಾಖೆಯ ಟಾರ್ಗೆಟ್‌ ಒತ್ತಡವೂ ಕಾರಣ ಎನ್ನಲಾಗುತ್ತಿದೆ. ಇತರ ಅಪರಾಧ ಕೇಸ್‌ ಒತ್ತಡಕ್ಕೆ ಪೊಲೀಸ್‌ ಇಲಾಖೆಯೂ ಈ ವಿಷಯದಲ್ಲಿ ಇತಿಮಿತಿ ಕಾಯ್ದುಕೊಳ್ಳುತ್ತಿದೆ.

ಇದೆಲ್ಲದರಿಂದ ಕಣ್ಣೆದುರೇ ಮಕ್ಕಳು ಮದ್ಯದ ವ್ಯಸನಕ್ಕೆ ಒಳಗಾಗುತ್ತಿರುವುದು, ಹೆಣ್ಣು ಮಕ್ಕಳು ಓಡಾಡುವ ರಸ್ತೆ ಪಕ್ಕದಲ್ಲಿಯೇ ಮದ್ಯ ಮಾರಾಟ ನಡೆಯುತ್ತಿರುವುದು ತಾಯಂದಿರ ಹೊಟ್ಟೆಗೆ ಬೆಂಕಿ ಇಟ್ಟಂತಾಗುತ್ತಿದೆ.

‘ಅಪ್ಪ ದಿನವೂ ಕುಡಿದು ಬಂದು ಹೊಡೆಯುತ್ತಾರೆ. ಹೇಗಾದರು ಮದ್ಯ ಮಾರಾಟ ನಿಲ್ಲಿಸಿ’ ಎಂದು ಮಕ್ಕಳು ಅಧಿಕಾರಿಗಳ ಬಳಿ ಗೋಳಿಡುವ ಮಟ್ಟಿಗೆ ವ್ಯವಸ್ಥೆ ಹದಗೆಟ್ಟು ಹೋಗುತ್ತಿದೆ.

ಪೊಲೀಸ್‌ ಇಲಾಖೆಯ 112 ಸಹಾಯವಾಣಿಗೆ ಬರುತ್ತಿರುವ ಬಹುಪಾಲು ದೂರುಗಳಲ್ಲಿ ಮದ್ಯ ವ್ಯಸನಿಗಳ ಉಪಟಳದ್ದೇ ಹೆಚ್ಚು. ಈಗ ಮೀನುಗಾರಿಕೆ ಬಂದರುಗಳಲ್ಲಿಯೂ ಅಕ್ರಮ ಮದ್ಯ ಮಾರಾಟ ಚುರುಕಾಗುತ್ತಿದೆ.

ಬಂದರು ಗಲ್ಲಿ ನಡೆಯುತ್ತಿರುವ ಮದ್ಯ ಮಾರಾಟ ತಡೆಯುವಂತೆ ಭಟ್ಕಳ, ಹೊನ್ನಾವರ ಸ್ಥಳೀಯರು ಕಳೆದ ವರ್ಷವೂ ಜಿಲ್ಲಾಧಿಕಾರಿ ಅವರಿಗೇ ಮನವಿ ಮಾಡಿದ್ದರು. ಆದರೂ, ವ್ಯವಸ್ಥೆ ಬದಲಾಗಿಲ್ಲ.

ಕರಾವಳಿ ಭಾಗದಲ್ಲಿ ಗೋವಾ ಮದ್ಯ ಘಾಟು ಹೆಚ್ಚು. ಮಾಜಾಳಿ ಚೆಕ್‌ಪೋಸ್ಟ್‌ ಮೂಲಕವೇ ಸರಾಗವಾಗಿ ಜಿಲ್ಲೆಗೆ ಮದ್ಯ ಬರುತ್ತದೆ. ಜತೆಗೆ ಕಳ್ಳಬಟ್ಟಿಗೂ ಅಂಕೆ ಇಲ್ಲ. ಗೂಡಂಗಡಿ, ಕೆಲ ಹಳ್ಳಿಗಳಲ್ಲಿ ಮನೆಗಳಲ್ಲಿಯೂ ಮದ್ಯ ಸಿಗುತ್ತದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಬಹುತೇಕ ಊರುಗಳಲ್ಲಿಯೂ ಸುಲಭದಲ್ಲಿ ಮದ್ಯ ಲಭ್ಯ.

ಸಿದ್ದಾಪುರದಲ್ಲಿ ಕಳ್ಳಬಟ್ಟಿ ಗೋಳು ಹೇಳತೀರದು. ಯಲ್ಲಾಪುರದ ಕಿರವತ್ತಿಯಲ್ಲಿ ಕಿರಾಣಿ ಅಂಗಡಿಯಲ್ಲೂ ಮದ್ಯ ಸಿಗುತ್ತದೆ. ಪಟ್ಟಣದ ಬಾರ್‌ಗಳಿಂದ ಸಗಟು ದರದಲ್ಲಿ ಮದ್ಯ ತಂದು, ಹಳ್ಳಿಗಳಲ್ಲಿ ದುಬಾರಿ ಬೆಲೆಗೆ ಮಾರುತ್ತಾರೆ. ಮದ್ಯ ದಂಧೆಯಲ್ಲಿ ಶಾಲೆ, ದೇವಸ್ಥಾನ, ಮನೆಗಳಿರುವ ಯಾವ ನೈತಿಕತೆಗೂ ಬೆಲೆಯೇ ಇಲ್ಲ. ಶಿರಸಿ, ಹಳಿಯಾಳ, ಮುಂಡಗೋಡ, ಜೋಯಿಡಾ, ದಾಂಡೇಲಿಯಲ್ಲೂ ಮದ್ಯದ ಗೋಳು ಕೇಳುವವರಿಲ್ಲ.

ಜಿಲ್ಲೆಯಲ್ಲಿ ಕಳ್ಳಬಟ್ಟಿ ಬಹುತೇಕ ಕಡಿಮೆಯಾಗಿತ್ತು. ಗೋವಾ ಮದ್ಯ ಅಲ್ಲಲ್ಲಿ ಸಿಗುತ್ತಿದೆ. ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ಕಡೆ ಮತ್ತೆ ಕಳ್ಳಬಟ್ಟಿ ಶುರುವಾಗಿದೆ. ಅದನ್ನು ನಿಯಂತ್ರಣ ಮಾಡುತ್ತಿದ್ದೇವೆ. ಎಲ್ಲಾದರು ಅಕ್ರಮವಾಗಿ ಮದ್ಯ ದಂಧೆ ನಡೆಯುತ್ತಿದ್ದರೆ, ಜನರು ಅಬಕಾರಿ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 08382 227094/ 220377 ಅಥವಾ ನನ್ನ ಮೊಬೈಲ್‌ ಸಂಖ್ಯೆ 9449597115 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಮಾಹಿತಿ ಕೊಟ್ಟವರ ಹೆಸರು ಗೌಪ್ಯವಾಗಿಡುತ್ತೇವೆ.

ವನಜಾಕ್ಷಿ ಎಂ., ಅಬಕಾರಿ ಡಿಸಿ, ಕಾರವಾರಮುಖ್ಯಾಂಶಗಳುಹೊಲ, ಕೆರೆ, ಬೀದಿಗಳಲ್ಲಿಮದ್ಯ, ನೀರಿನ ಬಾಟಲಿಗಳ ರಾಶಿಕರಾವಳಿಯಲ್ಲಿ ಸುಲಭವಾಗಿ ಗೋವಾ ಅಕ್ರಮ ಮದ್ಯ ಲಭ್ಯಸಿದ್ದಾಪುರ ತಾಲೂಕಿನಲ್ಲಿ ರಾಜಾರೋಶವಾಗಿ ಮದ್ಯ ಮಾರಾಟಕಿರವತ್ತಿಯಲ್ಲಿ ಹೆದ್ದಾರಿ ಪಕ್ಕದಲ್ಲಿ ಮದ್ಯ ಮಾರಾಟಕ್ಕೆ ಅಂಕೆ ಇಲ್ಲದಂಧೆಗೆ ಅಬಕಾರಿ, ಪೊಲೀಸ್‌ ಕೆಳ ಹಂತದ ಅಧಿಕಾರಿಗಳ ಸಾಥ್‌

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button