ಮದುವೆಗೆ ತೆರಳಿ ಮಸಣ ಸೇರಿದ ದುರ್ದೈವಿಗಳು

ಅವರೆಲ್ಲರೂ ಮದುವೆ ಸಂಭ್ರಮ ಮುಗಿಸಿ ಖುಷಿಯಾಗಿ ವಾಪಸ್ ಆಗುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ೫೦ ಮಂದಿ ಪ್ರಯಾಣಿಕರಿದ್ದ ಬಸ್ ಆಳವಾದ ಕಮರಿಗೆ ಬಿದ್ದು ೨೫ ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಾಖಂಡ್‌ನ ಪೌರಿಗಡ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದೆ.
ಇದುವರೆಗೂ ೨೫ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಹಲವರು ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಸ್ಥಳದಲ್ಲಿ ಕತ್ತಲುಕವಿದ ವಾತಾವರಣವಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯುಂಟಾಗಿದೆ.
ಘಟನೆಯಲ್ಲಿ ೧೫ ಮಂದಿಯನ್ನು ರಕ್ಷಿಸಲಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ, ರೋದನೆ ಮುಗಿಲುಮುಟ್ಟಿದೆ.ಮದುವೆ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ ವಾಪಸ್ ಆಗುತ್ತಿದ್ದ ವೇಳೆ ಈ ಭೀಕರ ಅವಘಡ ಸಂಭವಿಸಿದೆ. ಸ್ಥಳೀಯರು ಈ ಘಟನೆಯನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ರಾತ್ರಿಯಾದ ಕಾರಣ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ.
ದುರ್ಘಟನೆ ಸಂಭವಿಸಿ ಸ್ಥಳದಲ್ಲಿ ಯಾವುದೇ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ, ಮೊಬೈಲ್ ಫೋನ್ ಗಳಲ್ಲಿನ ಬ್ಯಾಟರಿಯ ಬೆಳಕಿನಲ್ಲೇ ಬಸ್ ನಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಹರಸಾಹಸಪಡಬೇಕಾಯಿತು.ಸುದ್ದಿ ತಿಳಿದ ತಕ್ಷಣ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಕ್ಷಣವೇ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಗೆ ಭೇಟಿನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಪೌರಿಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ದೂರವಾಣಿ ಮುಖಾಂತರ ಮಾತುಕತೆ ನಡೆಸಿ, ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಸೂಚನೆ ನೀಡಿದರು. ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳಿಗೂ, ರಕ್ಷಣಾ ಕಾರ್ಯಾಚರಣೆಗೂ ನಿಗಾವಹಿಸುವಂತೆ ಸೂಚನೆ ನೀಡಿದ್ದಾರೆ.
ಸರ್ಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಘಟನೆಯಲ್ಲಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಒದಗಿಸುವಂತೆ ಸೂಚನೆ ನೀಡಿದ್ದಾರೆ.
ಖುದ್ದು ಮುಖ್ಯಮಂತ್ರಿಯವರೇ ರಕ್ಷಣಾ ಕಾರ್ಯಾಚರಣೆಯ ಸಿದ್ಧತೆಗಳ ಬಗ್ಗೆ ಮೇಲ್ವಿಚಾರಣೆ ನಡೆಸಿ, ಆಂಬ್ಯುಲೆನ್ಸ್, ಬೆಳಕಿನ ವ್ಯವಸ್ಥೆ, ರಕ್ಷಣಾ ಕಾರ್ಯಾಚರಣೆಗೆ ಬೇಕಾದ ಸಲಕರಣೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.