ಮತ ಹಾಕದೆ ಬ್ಯಾಲೆಟ್ ಪೇಪರ್ ಖಾಲಿ ಬಿಟ್ಟ ಶಾಸಕ..?

ರಾಜ್ಯಸಭೆ ಚುನಾವಣೆಯಲ್ಲಿ ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಯಾರಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್ ಬಿಟ್ಟಿದ್ದಾರೆ.ಜೆಡಿಎಸ್ ಜೊತೆ ಮುನಿಸಿಕೊಂಡಿದ್ದ ಅವರು ಇತ್ತ ಸ್ವಪಕ್ಷದ ಅಭ್ಯರ್ಥಿಗೂ ಮತ ಹಾಕದೆ ಇನ್ನೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಗೂ ಮತ ಹಾಕದೆ ಬ್ಯಾಲೆಟ್ ಪೇಪರ್‍ನಲ್ಲಿ ಯಾರಿಗೂ ಸೂಚಿಸದೆ ಖಾಲಿ ಬಿಟ್ಟಿದ್ದಾರೆ.
ನಿಯಮಗಳ ಪ್ರಕಾರ ಮತ ಚಲಾಯಿಸುವ ಶಾಸಕರು ಬ್ಯಾಲೆಟ್ ಪೇಪರ್‍ನಲ್ಲಿ ಯಾವುದಾದರೂ ಒಬ್ಬ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು.
ಇಲ್ಲದಿದ್ದರೆ ಅದನ್ನು ಎಣಿಕೆ ವೇಳೆ ಪರಿಗಣಿಸಲಾಗುವುದಿಲ್ಲ.
ಕೋಲಾರದ ಶಾಸಕ ಶ್ರೀನಿವಾಸ್ ಗೌಡ ಕೂಡ ಕಾಂಗ್ರೆಸ್‍ಗೆ ಮತ ಚಲಾಯಿಸಿದ್ದು, ಮತ್ತೊಂದು ಕಡೆ ಎಸ್.ಆರ್.ಶ್ರೀನಿವಾಸ್ ಬ್ಯಾಲೆಟ್ ಪೇಪರ್‍ನಲ್ಲಿ ಖಾಲಿ ಬಿಟ್ಟಿದ್ದರಿಂದ ಜೆಡಿಎಸ್‍ಗೆ 2 ಮತ ಖೋತಾ ಆಗಿದೆ.ವಿಧಾನಸಭೆಯಲ್ಲಿ 32 ಶಾಸಕರನ್ನು ಹೊಂದಿದ್ದ ಜೆಡಿಎಸ್ ಎರಡು ಮತಗಳನ್ನು ಕಳೆದುಕೊಂಡಿರುವುದರಿಂದ ಅಧಿಕೃತ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 30 ಮತಗಳು ಲಭಿಸುವ ಸಂಭವವಿದೆ.