ರಾಜ್ಯ

ಮತ್ತೆ ಕೊರೊನಾ ಭಯ, ಕಡ್ಡಾಯವಾಗುತ್ತಾ ಮಾಸ್ಕ್..?

ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕೂಡ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಹೊಸ ವರ್ಷದ ಆಚರಣೆಗಳಿಗೆ ನಿರ್ಬಂಧಗಳನ್ನು ವಿಧಿಸುವ ಚರ್ಚೆಗಳಾಗಿವೆ.

ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಅಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ರವಾನಿಸಿರುವ ಸೂಚನಾ ಪತ್ರ ಆಧರಿಸಿ ಚರ್ಚೆಗಳನ್ನು ನಡೆಸಲಾಗಿದೆ.ಕೋವಿಡ್ ಓಮಿಕ್ರಾನ್‍ನ ಉಪತಳಿ ಬಿಎಫ್-7 ಚೀನಾ, ಅಮೆರಿಕ, ಕೊರಿಯಾ, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳನ್ನು ಕಂಗಾಲಾಗಿಸಿದೆ.

ಚೀನಾದಲ್ಲಿ ಆಸ್ಪತ್ರೆಗೆ ದಾಖಲಾಗುವವರು ಮತ್ತು ಸಾವಿನ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮುನ್ನೆಚ್ಚರಿಕೆ ಕ್ರಮಗಳು ಜಾರಿಯಾಗುತ್ತಿವೆ.ವಿಶ್ವಸಂಸ್ಥೆ ಕೋವಿಡ್ ಪ್ರಕರಣಗಳು ತಗ್ಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಪ್ರೋಟೋಕಾಲ್‍ಗಳನ್ನು ಜನವರಿಯಲ್ಲಿ ಸಡಿಲಿಸುವ ಸಿದ್ಧತೆಯಲ್ಲಿತ್ತು.

ಈ ವೇಳೆಗೆ ಉಪತಳಿಯ ಅವಾಂತರಗಳು ಕೆಲವು ರಾಷ್ಟ್ರಗಳನ್ನು ಬಾಧಿಸಿರುವುದರಿಂದ ಮತ್ತೆ ಕೋವಿಡ್ ನಿರ್ಬಂಧಗಳು ಕಡ್ಡಾಯವಾಗಿ ಮರು ಜಾರಿಯಾಗುವ ಮುನ್ಸೂಚನೆ ಸಿಕ್ಕಿದೆ.ಇಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯದ ಕುರಿತು ಜನಜಾಗೃತಿ ಮೂಡಿಸಲಾಗುವುದು.

ಸದ್ಯಕ್ಕೆ ಯಾವುದೇ ದಂಡ ಪ್ರಯೋಗ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ನಿನ್ನೆ ನಡೆದ ಸಭೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲು ಚರ್ಚಿಸಲಾಗಿದೆ. ರಾಜ್ಯಮಟ್ಟದ ತಾಂತ್ರಿಕ ಸಲಹಾ ಸಮಿತಿ ಇಂದು ಸಭೆ ನಡೆಸಲಿದ್ದು, ಅಲ್ಲಿ ಅನುಮತಿ ಪಡೆದು ಬಹುತೇಕ ನಾಳೆಯಿಂದಲೇ ಮಾಸ್ಕ್ ಕಡ್ಡಾಯಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಿದರು.

ಹೊಸ ವರ್ಷಾಚರಣೆಗೆ ವಿದೇಶಿಯರು ಸೇರಿದಂತೆ ಭಾರೀ ಪ್ರಮಾಣದ ಜನಸಂದಣಿಯಾಗುವ ನಿರೀಕ್ಷೆಗಳಿವೆ. ಈ ಹಿನ್ನೆಲೆಯಲ್ಲಿ ಕೋವಿಡ್ ಪ್ರೋಟೋಕಾಲ್‍ಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.ಮಾರುಕಟ್ಟೆ, ಮಾಲ್‍ಗಳು, ವಾಣಿಜ್ಯ ಸಂಕೀರ್ಣ, ಥಿಯೇಟರ್‍ಗಳು, ಪಾರ್ಕ್, ಬಸ್ ನಿಲ್ದಾಣ, ಮೆಟ್ರೋ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸಲು ಕ್ರಮ ಕೈಗೊಳ್ಳಲಾಗುವುದು.

ಮಾಸ್ಕ್ ಧಾರಣೆ, ಅಂತರ ಪಾಲನೆ, ಸ್ಯಾನಿಟೈಜರ್ ಬಳಕೆ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.ಕೋವಿಡ್ ಪ್ರಕರಣಗಳು ಏಕಾಏಕಿ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಚಳಿಗಾಲವಾಗಿರುವುದರಿಂದ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಸದ್ಯಕ್ಕೆ ಚೀನಾ ಮತ್ತು ಇತರ ದೇಶಗಳನ್ನು ಕಾಡುತ್ತಿರುವ ಉಪತಳಿ ಭಾರತ ಪ್ರವೇಶಿಸಿಲ್ಲ.

ಆದರೆ, ಇಲ್ಲಿರುವ ಸೋಂಕುಗಳೇ ರೂಪಾಂತರಗೊಳ್ಳಬಹುದು ಅಥವಾ ಬಿಎಫ್-7 ಉಪತಳಿಯ ಪ್ರವೇಶವಾಗಬಹುದು. ಯಾವುದಕ್ಕೂ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಸರ್ಕಾರದ ಹಿರಿಯ ಅಕಾರಿಗಳು ಹೇಳಿದ್ದಾರೆ.ರಾಜ್ಯಾದ್ಯಂತ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರವನ್ನು ಮರು ಜಾರಿಗೊಳಿಸುವ ಸಾಧ್ಯತೆಗಳಿವೆ.

ಕಳೆದ ಎರಡು ವರ್ಷಗಳಿಂದ ವಿಶ್ವವನ್ನೇ ಕಂಗೆಡಿಸಿದ್ದ ಕೊರೊನಾ ಈ ವರ್ಷದ ಆರಂಭದಿಂದ ಬಿಡುವು ನೀಡಿತ್ತು. ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಆದರೆ, ಈಗ ಮತ್ತೆ ಕೆಲವು ದೇಶಗಳಲ್ಲಿ ಸೋಂಕು ಹೆಚ್ಚಾಗಿರುವುದು ಆತಂಕ ಮೂಡಿಸಿದೆ.ಭಾರತದಲ್ಲಿ ಕೋವಿಡ್ ಲಸಿಕೆಯ ಮೊದಲ ಮತ್ತು ಎರಡನೆ ಡೋಸ್‍ಅನ್ನು ಬಹುತೇಕ ಮಂದಿ ಪಡೆದಿದ್ದು, ಬೂಸ್ಟರ್ ಡೋಸ್‍ಅನ್ನು ಶೇ.40ರಷ್ಟು ಜನ ತೆಗೆದುಕೊಂಡಿದ್ದಾರೆ.

ಓಮಿಕ್ರಾನ್ ಉಪತಳಿಯ ಹಾವಳಿಯಿಂದ ಮತ್ತೆ ಲಸಿಕೆ ಅವಲಂಬನೆ ಹೆಚ್ಚಾಗುತ್ತಿದ್ದು, ಬೂಸ್ಟರ್ ಲಸಿಕೆ ಪಡೆಯುವಂತೆ ಸಲಹೆಗಳು ಕೇಳಿಬರುತ್ತಿವೆ. ಎರಡು ವರ್ಷಗಳ ಬಳಿಕ ಹೊಸ ವರ್ಷಾಚರಣೆಗೆ ಅದ್ಧೂರಿ ತಯಾರಿಗಳು ನಡೆಯುತ್ತಿದ್ದು, ಈಗ ಕೋವಿಡ್ ಆತಂಕ ಎಲ್ಲವನ್ನೂ ಅಯೋಮಯ ಮಾಡಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button