
ಮಡಿವಾಳ ಕೆರೆ ಸಮೀಪ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬೊಮ್ಮನಹಳ್ಳಿ ಠಾಣೆ ಪೊಲೀಸರು, ಆರೋಪಿ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಅಂಜನಾಪುರ ನಿವಾಸಿ ಇಮ್ರಾನ್ (28) ಬಂಧಿತ ಆರೋಪಿ.
ಸಿಸಿಟಿವಿ ದೃಶ್ಯಾವಳಿ ನೀಡಿದ ಸುಳಿವು ಆಧರಿಸಿ ಆಗಸ್ಟ್ 11 ರಿಂದ ತಲೆಮರೆಸಿಕೊಂಡಿದ್ದ ಆರೋಪಿ ಇಮ್ರಾನ್‌ನನ್ನು ಬಂಧಿಸಿರುವುದು ಪ್ರಕರಣದ ವಿಶೇಷವಾಗಿದೆ.
ಆರೋಪಿ ಇಮ್ರಾನ್, ವೇಶ್ಯಾವೃತ್ತಿ ಮಾಡುವ ಲಕ್ಷ್ಮೀ ಪುರ ನಿವಾಸಿ ಹಸೀನಾ (39) ಎಂಬುವವರನ್ನು ಆಗಸ್ಟ್ 10 ರಂದು ರಾತ್ರಿ ಆಟೋದಲ್ಲಿ ಕರೆದುಕೊಂಡು ಬಂದು ಮಡಿವಾಳ ಕೆರೆ ಸಮೀಪ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದ. ಈ ಕುರಿತು ಇಮ್ರಾನ್ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರವಾದ ಸಿಸಿಟಿವಿ: ಆಗಸ್ಟ್ 11 ರಂದು ಬೆಳಗ್ಗೆ ಮಡಿವಾಳ ಕೆರೆ ಬಳಿ ಅಪರಿಚಿತ ಮಹಿಳೆಯ ಮೃತ ದೇಹ ಪತ್ತೆಯಾಗಿತ್ತು. ಆಕೆ ಯಾರು ಎಂಬುದನ್ನು ಪತ್ತೆ ಹಚ್ಚುವುದೇ ಸವಾಲಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಕ್ಷಿಪ್ರ ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್ ಎಸ್. ಪ್ರಶಾಂತ್ ನೇತೃತ್ವದ ತಂಡ, ಮೊದಲು ಮಹಿಳೆಯ ಗುರುತು ಪತ್ತೆ ಹಚ್ಚುವಿಕೆ ಕಾರ್ಯಕ್ಕೆ ಇಳಿದಿತ್ತು.
ಮೃತ ಮಹಿಳೆಯ ಫೊಟೋ ತೆಗೆದು ನಗರದ ಠಾಣೆಗಳಿಗೆ ಮಾಹಿತಿ ರವಾನಿಸಲಾಗಿತ್ತು. ಗುರುತು ಪತ್ತೆಯ ಪ್ರಕಟಣೆ ಹೊರಡಿಸಲಾಗಿತ್ತು. ಇದರ ಫಲವಾಗಿ ಕೊಲೆಯಾಗಿರುವ ಮಹಿಳೆ ಲಕ್ಷ್ಮೀ ಪುರ ನಿವಾಸಿ ಹಸೀನಾ ಎಂಬುದು ಗೊತ್ತಾಗಿತ್ತು.
ಆಕೆಯ ವಿಳಾಸ ಪತ್ತೆ ಹಚ್ಚಿ ಗಂಡ ಹಾಗೂ ಮಕ್ಕಳನ್ನು ಕರೆಸಿ ಮೃತ ದೇಹ ತೋರಿಸಿದಾಗ ಹಸೀನಾರನ್ನು ಗುರುತು ಹಿಡಿದಿದ್ದರು.
ಮಹಿಳೆ ಹಸೀನಾಳ ಹಿನ್ನೆಲೆಯ ಬಗ್ಗೆ ಮಾಹಿತಿ ಕಲೆ ಹಾಕಿ ಆಕೆ ಓಡಾಡುತ್ತಿದ್ದ ಪ್ರದೇಶಗಳ ಸುಮಾರು 80 ಸಿಸಿ ಟಿವಿ ಫೂಟೇಜ್ ಸಂಗ್ರಹಿಸಿ ಅವುಗಳನ್ನು ಪರಿಶೀಲಿಸಲಾಯಿತು. ಈ ಪೈಕಿ ಒಂದು ಸಿಸಿ ಕ್ಯಾಮೆರಾದಲ್ಲಿ ಹಸೀನಾ, ಇಮ್ರಾನ್ ಆಟೋ ಹತ್ತುತ್ತಿರುವುದು ಕಂಡು ಬಂದಿತ್ತು.
ಈ ಜಾಡು ಹಿಡಿದು ತಲೆಮರೆಸಿಕೊಂಡಿದ್ದ ಇಮ್ರಾನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಾಯ್ಬಿಟ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹಣಕ್ಕಾಗಿ ನಡೆದಿತ್ತು ಕೊಲೆ: ಹಸೀನಾ ಅವರನ್ನು ಈ ಹಿಂದೆ ಎರಡು ಬಾರಿ ಭೇಟಿ ಮಾಡಿದ್ದ ಇಮ್ರಾನ್, ತನ್ನೊಟ್ಟಿಗೆ ಕರೆದೊಯ್ದಿದ್ದ. ಹೀಗಾಗಿ, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆಗಸ್ಟ್ 10 ರಂದು ರಾತ್ರಿ ಜೆ. ಪಿ. ನಗರ ಸಮೀಪ ಆಕೆಯನ್ನು ಭೇಟಿ ಮಾಡಿ ಆಟೋಗೆ ಹತ್ತಿಸಿಕೊಂಡು ಮನೆಗೆ ಬಿಡುವುದಾಗಿ ತಿಳಿಸಿದ್ದ.
ಮಡಿವಾಳದಲ್ಲಿ ಆಕೆಗೆ ಮದ್ಯ ಹಾಗೂ ಆಮ್ಲೆಟ್ ಕೊಡಿಸಿದ್ದ. ಬಳಿಕ ಹಸೀನಾ ಬಳಿ ಹೆಚ್ಚು ಹಣ ಇರುವುದಾಗಿ ನಂಬಿದ್ದ ಇಮ್ರಾನ್, ಆಕೆಯನ್ನು ಕೊಲೆಗೈದು ದೋಚುವ ಸಂಚು ರೂಪಿಸಿದ್ದ.
ಅದರಂತೆ ಕೆರೆ ಸಮೀಪ ಕರೆದುಕೊಂಡು ಬಂದು ಹಣ ಕೊಡುವಂತೆ ಕೇಳಿದಾಗ ಹಸೀನಾ ಪ್ರತಿರೋಧ ತೋರಿದ್ದರು. ಇಬ್ಬರ ನಡುವೆ ಜಗಳ ನಡೆದು ಹಸೀನಾ ಕೆಳಗೆ ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸೈಜುಗಲ್ಲು ಎತ್ತಿ ಹಾಕಿ ಕೊಲೆಗೈದಿದ್ದ.
ಬಳಿಕ ಆಕೆಯ ಪರ್ಸ್‌ನಲ್ಲಿದ್ದ ಸುಮಾರು ಮೂರು ಸಾವಿರ ರೂ., ಆಕೆಯ ಪೋಟೋ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದ. ಘಟನಾ ಸ್ಥಳದಲ್ಲಿ ತನ್ನ ಒಂದು ಜತೆ ಶೂಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.