
ಮಂಡ್ಯ : ಮಗಳು ಸತ್ತು ನಾಲ್ಕು ದಿನವಾದರೂ ಯಾರಿಗೂ ತಿಳಿಸದೇ, ತಾಯಿಯೊಬ್ಬಳು ಮಗಳ ಶವದ ಬಳಿಯೇ ಮಲಗಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯದ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ಈ ಬೆಚ್ಚಿ ಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಸತ್ತು ನಾಲ್ಕು ದಿನವಾದರೂ ಯಾರಿಗೂ ತಿಳಿಸದ ತಾಯಿ : 34 ವರ್ಷ ವಯಸ್ಸಿನ ರೂಪಾ ಎಂಬವರು ನಾಲ್ಕು ದಿನಗಳಿಂದ ಹಿಂದೆಯೇ ಮೃತಪಟ್ಟಿದ್ದಾರೆ.
ಆದರೆ, ತಾಯಿ ನಾಗಮ್ಮ ಮಾತ್ರ ಈ ವಿಚಾರವನ್ನು ಯಾರಿಗೂ ತಿಳಿಸಿಲ್ಲ. ಮಗಳ ಮೃತದೇಹವನ್ನು ಮನೆಯ ಒಳಗೆ ಇಟ್ಟು, ನಾಲ್ಕು ದಿನಗಳಿಂದ ಶವದ ಜೊತೆಗೆ ಕಾಲ ಕಳೆದಿದ್ದಾರೆ.
ಅನುಮಾನಗೊಂಡ ಜನ : ಕಳೆದ ಎರಡು ದಿನಗಳಿಂದ ಮನೆಯ ಸುತ್ತ ಮುತ್ತಲು ವಾಸನೆ ಬರುತ್ತಿತ್ತಾದರೂ, ಯಾವುದೋ ಪ್ರಾಣಿ ಸತ್ತಿರಬೇಕು ಎಂದು ಜನರು ಕೂಡಾ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ಈ ದುರ್ವಾಸನೆ ವಿಪರೀತವಾದಾಗ ಅಕ್ಕಪಕ್ಕದ ಜನರಿಗೂ ಅನುಮಾನ ಬಂದಿದೆ. ಅಲ್ಲದೆ, ನಾಲ್ಕು ದಿನಗಳಿಂದ ತಾಯಿ ನಾಗಮ್ಮ ಮತ್ತು ಮಗಳು ರೂಪಾ ಹೊರಗೆ ಬಾರದೇ ಇದ್ದದ್ದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಶವದ ಬಳಿಯೇ ಮಲಗಿದ್ದ ತಾಯಿ :ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ನೋಡಿದಾಗ ಬೆಚ್ಚಿ ಬೀಳುವ ಪ್ರಕರಣ ಬೆಳಕಿಗೆ ಬಂದಿದೆ. ಮಗಳು ರೂಪಾ ಮೃತದೇಹದ ಬಳಿಯೇ ತಾಯಿ ಕೂಡಾ ಮಲಗಿರುವ ದೃಶ್ಯ ಕಂಡು ಬಂದಿದೆ. ನಂತರ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ರೂಪ ಸಾವು ಹೇಗೆ ಸಂಭವಿಸಿದೆ ಎಂದು ಮಾತ್ರ ಇನ್ನು ತಿಳಿದು ಬಂದಿಲ್ಲ, ಈ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.