ಮಗನ ಶವ ಪಡೆಯಲು ಭಿಕ್ಷೆ ಬೇಡಿದ ಅಪ್ಪ- ಅಮ್ಮ..!
Bihar couple forced to beg to collect money to release his body

ಇದೊಂದು ಮಾನವೀಯತೆ ತಲೆ ತಗ್ಗಿಸುವಂತಹ ಘಟನೆ. ತಮ್ಮ ಮಗನ ಸಾವಿನ ದುಃಖದಲ್ಲಿದ್ದ ದಂಪತಿ ಶವವನ್ನುಪಡೆದುಕೊಳ್ಳಲು ಲಂಚ ನೀಡುವ ಸಲುವಾಗಿ ಭಿಕ್ಷೆ ಬೇಡುತ್ತಿರುವ ವಿಡಿಯೋ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರಿ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ಘಟಕದ ಸಿಬ್ಬಂದಿಗಳು 50 ಸಾವಿರ ರೂ. ಲಂಚ ಕೇಳಿದರು ಎಂಬ ಆರೋಪವಿದೆ.ಮಹೇಶ್ ಠಾಕೂರ್ ಅವರ ಮಾನಸಿಕ ಅಸ್ವಸ್ಥ ಪುತ್ರ ಸಂಜೀವ್ ಠಾಕೂರ್ ತಾಜ್‍ಪುರ ಪೊಲೀಸ್ ಠಾಣೆ ವ್ಯಾಪ್ತಿ ಆಹಾರ್ ಗ್ರಾಮದಿಂದ ನಾಪತ್ತೆಯಾಗಿದ್ದ. ಜೂ.6ರಂದು ಮುಸ್ರಿಘರಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಾಮಧೇಯ ಶವ ಪತ್ತೆಯಾಗಿತ್ತು. ಅದನ್ನು ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದರು.
ಮಾರನೇ ದಿನ ಸಂಬಂಧಿಕರು ಶವವನ್ನು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಹಸ್ತಾಂತರಿಸಲು ಆಸ್ಪತ್ರೆಯ ಸಿಬ್ಬಂದಿ ನಾಗೇಂದ್ರ ಮಲ್ಲಿಕ್ ನಿರಾಕರಿಸಿದ್ದು, 50 ಸಾವಿರ ಲಂಚ ಕೇಳಿದ್ದರು ಎಂದು ಆರೋಪಿಸಲಾಗಿದೆ. ಬಡ ಕುಟುಂಬದ ದಂಪತಿ ಲಂಚಕ್ಕಾಗಿ ಹಣ ಒದಗಿಸಲು ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಮಸ್ತಿಪುರ್‍ನ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಅವರು, ಬಹುಶಃ ಸಿಬ್ಬಂದಿ ಹಣ ಕೇಳಿಬರಹುದು. ಆದರೆ 50 ಸಾವಿರಕ್ಕಾಗಿ ಒತ್ತಾಯ ಮಾಡಿರಲು ಸಾದ್ಯವಿಲ್ಲ ಎಂದಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಲಂಚ ಕೇಳಿರುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಈ ಹಿಂದೆಯೂ ಕೂಡ ಇದೇ ಆಸ್ಪತ್ರೆಯಲ್ಲಿ ಲಂಚ ಕೇಳಿದ ಉದಾಹರಣೆಗಳು ಸಾಕಷ್ಟಿವೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತನಿಖಾ ಸಮಿತಿಯನ್ನು ರಚಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ. ಸಮಿತಿಯನ್ನು ರಚಿಸಿರುವುದಾಗಿ ಆಸ್ಪತ್ರೆಯ ಆಡಳಿತಮಂಡಳಿ ತಿಳಿಸಿದೆ.ಅಂಗಾಮಿ ಜಿಲ್ಲಾಧಿಕಾರಿ ವಿನಯ್‍ಕುಮಾರ್ ಅವರು ಆರೋಪಗಳನ್ನು ಸಂಪೂರ್ಣವಾಗಿ ಅಲ್ಲೆಗೆಳೆದಿದ್ದು, ಇದು ಆಸ್ಪತ್ರೆಯ ಮಾನಹಾನಿಗೆ ಮಾಡಿರುವ ಷಡ್ಯಂತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಮೂಲಕವೇ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಆಸ್ಪತ್ರೆಯ ಮೂಲಗಳು ಬೇರೆ ರೀತಿಯ ಹೇಳಿಕೆ ನೀಡಿದ್ದು, ಆರೋಪ ತೀವ್ರಗೊಂಡ ಬಳಿಕ ಆಸ್ಪತ್ರೆಯ ಕಾವಲುಗಾರರ ಜೊತೆಯಲ್ಲಿ ಕುಟುಂಬ ಸದಸ್ಯರಿಗೆ ಶವ ರವಾನೆ ಮಾಡಲಾಯಿತು ಎಂದು ತಿಳಿಸಲಾಗಿದೆ.