ರಾಜ್ಯ

ಮಂಗಳವಾರದ ‘ವಾಟ್ಸಾಪ್‌ ಸ್ಥಗಿತ’ದ ಬಗ್ಗೆ ವಿವರಣೆ ನೀಡುವಂತೆ ‘ಮೆಟಾ’ಗೆ ಕೇಂದ್ರದಿಂದ ಪತ್ರ

ಮಂಗಳವಾರ ಸುಮಾರು ಎರಡು ಗಂಟೆಗಳ ಕಾಲ ವಾಟ್ಸಾಪ್ ಸ್ಥಗಿತಗೊಂಡಿರುವುದರ ಹಿಂದಿನ ಕಾರಣಗಳನ್ನು ತಿಳಿಸುವಂತೆ ಸರ್ಕಾರವು ‘ಮೆಟಾ ಇಂಡಿಯಾ’ಗೆ ಪತ್ರ ಬರೆದಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ಹೇಳಿದ್ದಾರೆ.

ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತ್ವರಿತ ಸಂದೇಶ ಕಳುಹಿಸುವ ವೇದಿಕೆಯಲ್ಲಿ ಉಂಟಾದ ಅಡಚಣೆಯು ಆಂತರಿಕ ದೋಷ ಅಥವಾ ಸೈಬರ್‌ ಅಟ್ಯಾಕ್‌ನಿಂದ ಉಂಟಾಗಿದೆಯೇ ಎಂದು ತಿಳಿಯಲು ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.

ಅಡಚಣೆಯ ಸಮಯದಲ್ಲಿ ಕಂಪನಿಯ ಸರ್ವರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಸೈಬರ್ ಘಟನೆ ನಡೆದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸರ್ಟ್-ಇನ್) ನೊಂದಿಗೆ ಸಮನ್ವಯ ಸಾಧಿಸುವಂತೆಯೂ ಸಚಿವಾಲಯ ತನ್ನ ಪತ್ರದಲ್ಲಿ ವಾಟ್ಸಾಪ್‌ಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಆಂತರಿಕ ಅಂಶಗಳಿಂದಾಗಿ ಅಥವಾ ಕೆಲವು ಬಾಹ್ಯ ಸೈಬರ್‌ ಅಟ್ಯಾಕ್‌ನಿಂದಾಗಿ ವಾಟ್ಸಾಪ್‌ ಸ್ಥಗಿತವಾಗಿದೆಯೇ ಎಂದು ನಾವು ಅವರನ್ನು ಕೇಳಿದ್ದೇವೆ. ಅವರು ಕೆಲವೇ ದಿನಗಳಲ್ಲಿ ಸೂಕ್ತ ವಿವರಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ,” ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಂಗಳವಾರದಂದು ಸುಮಾರು ಎರಡು ಗಂಟೆಗಳ ಕಾಲ ಬಳಕೆದಾರರಿಗೆ ಟೆಕ್ಸ್ಟ್‌ ಮತ್ತು ವೀಡಿಯೊ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ಸೇವೆಯನ್ನು ಮರುಸ್ಥಾಪಿಸಿದ ನಂತರ, ಸ್ಥಗಿತಕ್ಕೆ ಕಾರಣವಾದ ‘ಸಮಸ್ಯೆಯನ್ನು ಪರಿಹರಿಸಲಾಗಿದೆ’ ಎಂದು ಮೆಟಾ ಹೇಳಿದ್ದು, ಬಳಕೆದಾರರಿಗೆ ಉಂಟಾದ ಅನಾನುಕೂಲತೆಗಾಗಿ ಕ್ಷಮೆಯಾಚಿಸಿತ್ತು.ವಾಟ್ಸಾಪ್‌ ತನ್ನ ಸೇವೆಗಳು ಸ್ಥಗಿತಗೊಂಡಿರುವುದಾಗಿ ಹೇಳಿತ್ತು.

ಆದರೆ ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ಯಾವುದೇ ವಿವರಣೆಯನ್ನು ನೀಡಿಲ್ಲ.ಅನೇಕರು ತಮ್ಮ ಡೆಸ್ಕ್‌ಟಾಪ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಬಳಸುತ್ತಿದ್ದ ವಾಟ್ಸಾಪ್ ವೆಬ್ ಕೂಡ ಸ್ಥಗಿತಗೊಂಡಿತ್ತು. ವಾಟ್ಸಾಪ್‌ ಪೇನಂತಹ ಇತರ ಸೇವೆಗಳೂ ಕಾರ್ಯಾಚರಣೆ ನಿಲ್ಲಿಸಿದ್ದವು.ಇದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಮೆಟಾ ಸೇವೆಗಳು ಜಾಗತಿಕ ಮಟ್ಟದಲ್ಲಿ ಸಮಸ್ಯೆ ಎದುರಿಸಿದಂತಾಗಿದೆ.

ಈ ಹಿಂದೆ 2021ರ ಅಕ್ಟೋಬರ್‌ನಲ್ಲಿ ಮೆಟಾದ ಎಲ್ಲಾ ಮೂರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ – ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ – ಸುಮಾರು ಏಳು ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಇಂತಹದ್ದೇ ಸಮಸ್ಯೆಯನ್ನು ಮೆಟಾ ಎದುರಿಸಿದೆ. ಆದರೆ ಈ ಬಾರಿ ವಾಟ್ಸಾಪ್‌ ಮಾತ್ರ ಈ ತೊಂದರೆಗೆ ಸಿಲುಕಿತ್ತು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button