ಭಾರತ್ ಜೋಡೋ ಯಾತ್ರೆ, ಅಲ್ಲಲ್ಲಾ… ಛೋಡೋ ಯಾತ್ರೆ

ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿಯವರು ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ, ಭಾರತ್ ಛೋಡೋ ಯಾತ್ರೆ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿದ್ದ ಹಿರಿಯ ನಾಯಕರೆಲ್ಲಾ ಒಬ್ಬೊಬ್ಬರಾಗಿಯೇ ಪಕ್ಷ ಬಿಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಔಟ್ ಆಫ್ ಆರ್ಡರ್ ಆಗಿದೆ ಎಂದು ಗೇಲಿ ಮಾಡಿದರು.
ಕಾಂಗ್ರೆಸ್ ಈಗ ನಡೆಸುತ್ತಿರುವ ಯಾತ್ರೆ ಭಾರತ ಜೋಡಿಸುವ ಯಾತ್ರೆಯಲ್ಲ, ಕಾಂಗ್ರೆಸ್‌ನಿಂದ ನಾಯಕರು ಹೊರ ಹೋಗುವ ಭಾರತ್ ಛೋಡೋ ಯಾತ್ರೆ ಎಂದು ಜರಿದರು.ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಇಡಿ ಸಮನ್ಸ್ ನೀಡಿರುವುದಕ್ಕೆ ಬಿಜೆಪಿ ಕಾರಣ ಎಂಬ ಆರೋಪಗಳನ್ನು ತಳ್ಳಿ ಹಾಕಿದ ಅವರು, ಇ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತವೆ.
ಕೇಂದ್ರ ಸರ್ಕಾರ ಯಾವುದರಲ್ಲೂ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಹೇಳಿದರು.ನನಗೆ ಇಡಿ ನೋಟೀಸ್ ನೀಡುವ ಮೂಲಕ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಗೆ ಅಡ್ಡಿಪಡಿಸಲು ಇ.ಡಿ. ಸಮನ್ಸ್ ಜಾರಿ ಮಾಡಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿರುವುದು ಸರಿಯಲ್ಲ. ಯಾರು ಹೆಚ್ಚು ಹಣ ಮಾಡುತ್ತಾರೋ ಅವರ ಮೇಲೆ ಇ.ಡಿ. ಕಣ್ಣಿಡುತ್ತಿದೆ. ಕಾನೂನಿನಂತೆ ಕ್ರಮ ಕೈಗೊಳ್ಳುತ್ತಿದೆ.
ಹಾಗಾಗಿ ವಿಚಾರಣೆಗೆ ಇ.ಡಿ. ನೋಟಿಸ್ ಜಾರಿ ಮಾಡಿದೆ. ಇದಕ್ಕೆ ಏನೇನೋ ಸಬೂಬು ಹೇಳಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು.ಡಿ.ಕೆ. ಶಿವಕುಮಾರ್ ಅವರಿಗೆ ನೀಡಿರುವ ಇ.ಡಿ. ಸಮನ್ಸ್‌ಗೂ ಬಿಜೆಪಿಗೂ ಸಂಬಂಧ ಇಲ್ಲ. ತಪ್ಪು ಮಾಡಿಲ್ಲ ಎಂದರೆ ಭಯ ಏಕೆ ಎಂದು ಕುಟುಕಿದರು.