
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ದೆಹಲಿ ತಲುಪಿದ್ದು, ಮಕ್ಕಳ್ ನಿಧಿ ಮೈಯಮ್ ಪಕ್ಷದ ಅಧ್ಯಕ್ಷ, ತಮಿಳು ನಟ ಕಮಲ್ ಹಸನ್ ಪಾಲ್ಗೊಂಡು ದೆಹಲಿಯಲ್ಲಿರುವ ತಮಿಳಿಗರು ಭಾರತ್ ಯಾತ್ರೆಯಲ್ಲಿ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೆರಾ, ಭೂಪಿಂದರ್ ಸಿಂಗ್ ಹೂಡ, ಕುಮಾರಿ ಸೆಲ್ಜಾ, ರಂದೀಪ್ ಸುರ್ಜೆವಾಲ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ.
ಶುಕ್ರವಾರ ಸುಧೀಂದ್ರ ಕುಲಕರ್ಣಿ, ಅದಕ್ಕೂ ಮೊದಲು ಆರ್‌ಬಿಐ ಮಾಜಿ ಗವರ್ನರ್ ರಘುರಾಮರಾಜನ್ ಕೂಡ ಭಾಗವಹಿಸಿ ಗಮನ ಸೆಳೆದಿದ್ದರು.
ದೆಹಲಿ ತಲುಪಿರುವ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಪಂಜಾಬ್ ಮೂಲಕ ಹಾದು ಹೋಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.ರಾಹುಲ್ ನೇತೃತ್ವದ ಭಾರತ್ ಜೋಡೊ ಯಾತ್ರೆ ನಿಲ್ಲಿಸುವ ಸಲುವಾಗಿ ಕೇಂದ್ರ ಸರ್ಕಾರ ಕೋವಿಡ್ 19 ವೈರಸ್ ಬಿಡುಗಡೆ ಮಾಡಿದೆ ಎಂದು ಶಿವಸೇನೆ ಆರೋಪಿಸಿದೆ.
ಯಾತ್ರೆಗೆ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿದೆ. ಹೀಗಾಗಿ ಯಾತ್ರೆಯನ್ನು ಕಾನೂನು ಸಂಚಿನ ಮೂಲಕ ನಿಲ್ಲಿಸಲಾಗದ ಕೇಂದ್ರ ಸರ್ಕಾರ ಇದೀಗ ಕೋವಿಡ್ ವೈರಸ್ ಬಿಡುಗಡೆ ಮಾಡಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಹೇಳಿದೆ.