ರಾಜ್ಯ

ಭಾರತ್ ಜೋಡೊ ಯಾತ್ರೆ ಲೋಗೊ ಬಿಡುಗಡೆ

ಸೆ.7ರಿಂದ ರಾಹುಲ್‍ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ಭಾರತ್ ಜೋಡೊ ಯಾತ್ರೆಯ ಲೋಗೊವನ್ನು ಕೆಪಿಸಿಸಿ ಕಚೇರಿಯಲ್ಲಿ ಇಂದು ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮ್ಮದ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉದಯಪುರದ ಚಿಂತನ-ಮಂಥನ ಶಿಬಿರದಲ್ಲಿ ತೀರ್ಮಾನ ಕೈಗೊಂಡಂತೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತದ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಯಿತು.

ಇದರ ಜತೆಗೆ ಪ್ರತಿ ಜಿಲ್ಲೆಯಲ್ಲೂ 75ಕಿ.ಮೀ. ಪಾದಯಾತ್ರೆ ಮಾಡಿ, ಆ.15ರಂದು ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಆಯೋಜಿಸಲು ಹೈಕಮಾಂಡ್ ವರಿಷ್ಠರು ಸೂಚಿಸಿದ್ದರು. ಇದರಂತೆ ನಮ್ಮ ಎಲ್ಲಾ ಜಿಲ್ಲಾ ನಾಯಕರು ಕೆಲವು ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿ ನಮ್ಮ ಕಾರ್ಯಕರ್ತರನ್ನು ತಲುಪಿದ್ದಾರೆ ಎಂದರು.

ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದರು. ಭಾರತ ಒಗ್ಗೂಡಿಸಲು ರಾಹುಲ್‍ಗಾಂಧಿ ನೇತೃತ್ವದಲ್ಲಿ ದೇಶದ ಐಕ್ಯತಾ ಯಾತ್ರೆ ನಡೆಯಲಿದೆ. ಪಾದಯಾತ್ರೆ ಜವಾಬ್ದಾರಿ ಕಾಂಗ್ರೆಸ್‍ವಹಿಸಿದ್ದರೂ ಕೂಡ ಇದು ಪಕ್ಷಾತೀತವಾಗಿರುತ್ತದೆ. ರಾಜ್ಯದಲ್ಲಿ 21 ದಿನ ಪಾದಯಾತ್ರೆ ನಡೆಯಲಿದೆ.

ಗುಂಡ್ಲುಪೇಟೆಯಿಂದ ರಾಯಚೂರುವರೆಗೆ ಬೆಳಿಗ್ಗೆಯಿಂದ ಸಂಜೆವರೆಗೆ ಪಾದಯಾತ್ರೆ ಸಾಗಲಿದೆ ಎಂದು ಹೇಳಿದರು.ದೇಶದಲ್ಲಿ ಸಾಮಾಜಿಕ ಸಾಮರಸ್ಯ ಹದಗೆಡುತ್ತಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ. ನಿರುದ್ಯೋಗ ಪ್ರಮಾಣ ತೀವ್ರಗೊಂಡಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ರೈತರ, ಕಾರ್ಮಿಕರ ಬದುಕು ಹಸನಾಗಬೇಕಾಗಿದೆ.

ಈ ಐದು ಉದ್ದೇಶಗಳಿಂದ ಎಲ್ಲ ವರ್ಗದವರನ್ನು ರಕ್ಷಣೆ ಮಾಡಲು ಭಾರತ್ ಜೋಡೊ ಯಾತ್ರೆ ನಡೆಯಲಿದೆ ಎಂದರು.ನಮ್ಮ ರಾಜ್ಯದಲ್ಲಿ ನಡೆಯುವ ಪಾದಯಾತ್ರೆ ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂಬ ವಿಶ್ವಾಸ ನಮಗಿದೆ. ಈ ಪಾದಯಾತ್ರೆಯಲ್ಲಿ ಶಿಕ್ಷಕರು, ನಿವೃತ್ತ ಅಕಾರಿಗಳು, ಸಂಘ-ಸಂಸ್ಥೆಯವರು, ರೈತರು, ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗುವುದು. ಪ್ರತಿ ದಿನ 25ಕಿ.ಮೀ. ದೂರ ಪಾದಯಾತ್ರೆ ಮಾಡಲಾಗುವುದು.

ಎಲ್ಲಾ ಜಿಲ್ಲೆಗಳ ಜನರು ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ರಾಹುಲ್‍ಗಾಂಧಿ ಅವರು ರಾಷ್ಟ್ರಾದ್ಯಂತ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದರು.ಸೆ.7ರಂದು ಕನ್ಯಾಕುಮಾರಿಯಲ್ಲಿ ಈ ಯಾತ್ರೆ ಪ್ರಾರಂಭವಾಗಲಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ರಾಜ್ಯದಲ್ಲಿ ಬಿ.ಕೆ.ಹರಿಪ್ರಸಾದ್ ಪಾದಯಾತ್ರೆ ಉಸ್ತುವಾರಿ ವಹಿಸಲಿದ್ದಾರೆ.

ರಾಷ್ಟ್ರಮಟ್ಟದ ಸಮಿತಿಯಲ್ಲಿ ಕೆ.ಜೆ.ಜಾರ್ಜ್, ಸಲೀಂ ಅಹಮ್ಮದ್ ಅವರಿಗೆ ಜವಾಬ್ದಾರಿ ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸಭೆ ನಡೆಸಿ ಯಾರೆಲ್ಲಾ 21 ದಿನಗಳ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಅಭಿಪ್ರಾಯ ಸಂಗ್ರಹಿಸಿ ಅವರನ್ನು ಆಯ್ಕೆ ಮಾಡಲಾಗುವುದು. ಅಧಿಕೃತ ವೆಬ್‍ಸೈಟ್‍ನಲ್ಲೂ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಬಳ್ಳಾರಿಯಲ್ಲಿ ಒಂದು ದಿನ ಸಾರ್ವಜನಿಕ ಸಮಾವೇಶ ನಡೆಸಲಾಗುವುದು. ಮೈಸೂರಿನಲ್ಲಿ ಅಕ್ಟೋಬರ್ 4-5ರಂದು ದಸರಾ ಮಹೋತ್ಸವ ನಡೆಯಲಿದ್ದು, ಈ ದಿನ ಯಾವ ರೀತಿ ಪಾದಯಾತ್ರೆ ನಡೆಸಬೇಕು ಎಂಬುದರ ಬಗ್ಗೆ ದೆಹಲಿ ನಾಯಕರ ಜತೆ ಚರ್ಚೆ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಹೊಡೆತ ಬಿದ್ದಿದೆ. ಸಂವಿಧಾನಕ್ಕೆ ರಕ್ಷಣೆ ಸಿಕ್ಕಿಲ್ಲ.

ಧರ್ಮ ರಾಜಕಾರಣ ಹೆಚ್ಚಾಗುತ್ತಿದೆ. ಎಲ್ಲರಿಗೂ ಸಮಾನತೆ, ಬಹುತ್ವದ ಸಮಾಜ, ಎಲ್ಲ ಧರ್ಮಗಳ ಜತೆ ಸಮನ್ವಯತೆ ಇರಬೇಕು. ಕೋಮುವಾದಿಗಳ ಕೈಗೆ ಅಧಿಕಾರ ಸಿಕ್ಕ ಮೇಲೆ ಧರ್ಮ ಒಡೆಯುವ ರಾಜಕಾರಣ ಹೆಚ್ಚಾಗಿದೆ. ಹೀಗಾಗಿ ಕಾಂಗ್ರೆಸ್ ಮತ್ತೆ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡಬೇಕು.ದೇಶದಲ್ಲಿ ಸಹೋದರತೆ ವಾತಾವರಣ ನಿರ್ಮಿಸಬೇಕು.

ಭಾರತ್ ಜೋಡೊ ಯಾತ್ರೆ ಸಾಮರಸ್ಯ ಹಾಗೂ ಐಕ್ಯತೆ ಸಾರುವ ಪಾದಯಾತ್ರೆಯಾಗಿದೆ. ರಾಹುಲ್‍ಗಾಂ ಜತೆ 125 ಮಂದಿ ಭಾರತ ಪಾದಯಾತ್ರಿಗಳು ಹೆಜ್ಜೆ ಹಾಕಲಿದ್ದಾರೆ. ಪಾದಯಾತ್ರೆ ವೇಳೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಸಾರಲಾಗುತ್ತದೆ ಎಂದು ಹೇಳಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button