ರಾಷ್ಟ್ರಿಯ

ಭಾರತೀಯ ವಾಯುಪಡೆ ಸೇನೆಗೆ ಮೂರು ಸಾವಿರ ಅಗ್ನಿವೀರರ ನೇಮಕಾತಿ ಆರಂಭ : 56,960 ಜನ ಅರ್ಜಿ ಸಲ್ಲಿಕೆ

ಹೊಸದಿಲ್ಲಿ: ಭಾರತೀಯ ಸೇನೆಗೆ ನಾಲ್ಕು ವರ್ಷದ ಅವಧಿಗೆ ‘ಅಗ್ನಿವೀರ’ರನ್ನು ನೇಮಕ ಮಾಡುವ ಅಗ್ನಿಪಥ ಯೋಜನೆ ವಿರೋಧಿಸಿ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದ ಬೆನ್ನಲ್ಲೇ, ನೇಮಕಾತಿ ಯೋಜನೆಗೆ ಯುವಕ ಜನರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ. ”ಮೂರು ಸಾವಿರ ಅಗ್ನಿವೀರರನ್ನು ನೇಮಿಸಿಕೊಳ್ಳುವ ದಿಸೆಯಲ್ಲಿ ವಾಯುಪಡೆಯು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಇದುವರೆಗೆ 56,960 ಜನ ಅರ್ಜಿ ಸಲ್ಲಿಸಿದ್ದಾರೆ.
ಜುಲೈ 5ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಇನ್ನೂ ಹೆಚ್ಚಿನ ಜನ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ,” ಎಂದು ವಾಯುಪಡೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ವರ್ಷಾಂತ್ಯದ ವೇಳೆಗೆ ವಾಯುಪಡೆಯು 3 ಸಾವಿರ ಅಗ್ನಿವೀರರನ್ನು ನೇಮಿಸಲು ತೀರ್ಮಾನಿಸಿದ್ದು, ಡಿ.30ರಿಂದ ತರಬೇತಿ ಆರಂಭಿಸಲಾಗುತ್ತದೆ.


ಏನಿದು ಅಗ್ನಿಪಥ್ ಯೋಜನೆ
ಕೋವಿಡ್‌ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ಸ್ಥಗಿತಗೊಂಡಿದ್ದು, ಕಳೆದೆರಡು ತಿಂಗಳಲ್ಲಿ ನೂರಾರು ಹುದ್ದೆಗಳಿಗೆ ಸೇನಾ ನೇಮಕದ ಅಧಿಸೂಚನೆಗಳು ಹೊರಬಿದ್ದಿವೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಗ್ನಿಪಥ ಎಂಬ ಯೋಜನೆಯನ್ನು ಘೋಷಿಸಿ, 46 ಸಾವಿರ ‘ಅಗ್ನಿವೀರ’ರನ್ನು ನೇಮಕ ಮಾಡಿಕೊಳ್ಳು ವುದಾಗಿ ತಿಳಿಸಿದ್ದರು. ಈ ಯೋಜನೆಯ ಭಾಗವಾಗಿ ವಾಯುಪಡೆಯು 3 ಸಾವಿರ ಅಗ್ನಿವೀರರನ್ನು ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು.

ವಯಸ್ಸು ಎಷ್ಟಿರಬೇಕು?: ಅಗ್ನಿಪಥ್‌ ಯೋಜನೆಯಡಿ ಭಾರತ ಸೇನೆಗೆ ಅಗ್ನಿವೀರರಾಗಿ ಸೇರಲು ಕನಿಷ್ಠ ಹದಿನೇಳೂವರೆ ವರ್ಷ (17.5 ವರ್ಷ) ಆಗಿರಬೇಕು. ಗರಿಷ್ಠ 21 ವರ್ಷವಾಗಿರಬೇಕು. ಈ ವಯೋಮಿತಿಯೊಳಗಿನ ಯುವಕ/ಯುವತಿಯರು ಮಾತ್ರ ಈ ಯೋಜನೆಯಡಿಯಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸಹುದು.
ಯೋಜನೆಯ ಉದ್ದೇಶವೇನು?: ಸೈನಿಕರ ಪಿಂಚಣಿ ಉಳಿಕೆ, ಯುವಕರಲ್ಲಿ ದೇಶಭಕ್ತಿ ಮೂಡಿಸುವುದು, ಸೈನಿಕರಾಗಿ ಸೇವೆ ಸಲ್ಲಿಸುವುದು, ಸೇನೆಯ ಸಾಮರ್ಥ್ಯ ಹೆಚ್ಚಿಸುವುದು ಹಾಗೂ ವಾರ್ಷಿಕ ಉದ್ಯೋಗ ಸೃಷ್ಟಿಯ ಕಾರಣದಿಂದ ಕೇಂದ್ರ ಸರಕಾರದ ತೀರ್ಮಾನವು ಉತ್ತಮವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ವೇತನ ಎಷ್ಟಿರುತ್ತದೆ?: ಆರಂಭದಲ್ಲಿ ವಾರ್ಷಿಕ 4.62 ಲಕ್ಷ ರೂ. ಪ್ಯಾಕೇಜ್‌ ವೇತನ ಇರುತ್ತದೆ. ನಾಲ್ಕನೇ ವರ್ದ ವೇಳೆಗೆ ನೀವು ವಾರ್ಷಿಕ 6.92 ಲಕ್ಷ ರೂ. ಪ್ಯಾಕೇಜ್‌ ಪಡೆಯುತ್ತೀರಿ. ಅಂದರೆ, ಆರಂಭಿಕವಾಗಿ ಮಾಸಿಕ 30,000 ರೂ ವೇತನ ಸಿಗಲಿದೆ. ಪ್ರತಿ ವರ್ಷವೂ ವೇತನ ಹೆಚ್ಚಳ ಇದ್ದು, ನಾಲ್ಕನೇ ವರ್ಷದಲ್ಲಿ ಮಾಸಿಕ 40 ಸಾವಿರ ರೂ. ವೇತನ ಸಿಗಲಿದೆ. ಅಗ್ನಿವೀರರಿಗೆ ಪಿಂಚಣಿ ಸಿಗುವುದಿಲ್ಲ. ಬದಲಿಗೆ ‘ಸೇವಾ ನಿಧಿ’ (ಅಗ್ನಿವೀರ್‌ ಕಾರ್ಪಸ್‌ ಫಂಡ್‌) ಲಾಭ ಸಿಗಲಿದೆ. ಮಾಸಿಕ ವೇತನದ ಶೇ.30ರಷ್ಟನ್ನು ಈ ನಿಧಿಗೆ ಕಡಿತಗೊಳಿಸಲಾಗುತ್ತದೆ. ಅಷ್ಟೇ ಮೊತ್ತವನ್ನು ಕೇಂದ್ರ ಸರಕಾರ ಪ್ರತಿ ತಿಂಗಳು ಠೇವಣಿ ಇಡಲಿದೆ. ನಾಲ್ಕು ವರ್ಷಗಳ ಸೇವೆಯ ನಂತರ, ‘ಸೇವಾ ನಿಧಿ’ಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಬಡ್ಡಿಯೊಂದಿಗೆ ಪಾವತಿಸಲಾಗುವುದು. ಅಂದರೆ, 4 ವರ್ಷ ಸೇವೆ ಪೂರೈಸಿದ ನಂತರ ಅಗ್ನಿವೀರರಿಗೆ ಒಂದೇ ಬಾರಿಗೆ ಸುಮಾರು 10.04 ಲಕ್ಷ ರೂಪಾಯಿ ಸಿಗಲಿದೆ.

Related Articles

Leave a Reply

Your email address will not be published. Required fields are marked *

Back to top button