ಅಂತಾರಾಷ್ಟ್ರೀಯರಾಜಕೀಯ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್‌ಗೆ ವಿಶ್ವಾಸಮತದಲ್ಲಿ ಭರ್ಜರಿ ಜಯ

ಲಂಡನ್: ಕೋವಿಡ್‌ ನಿರ್ವಹಣೆಯಲ್ಲಿನ ವೈಫಲ್ಯ, ಪಾರ್ಟಿಗೇಟ್ ಸೇರಿದಂತೆ ಇನ್ನಿತರ ಹಗರಣಗಳಿಂದಾಗಿ ಪಕ್ಷದ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ನಡೆದ ಅಗ್ನಿಪರೀಕ್ಷೆಯಲ್ಲಿ ಬ್ರಿಟನ್‌ ಪ್ರಧಾನಿ ಬೋರಿಸ್ ಜಾನ್ಸನ್‌ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಬ್ರಿಟನ್‌ ಸಂಸತ್‌ನಲ್ಲಿ ಸೋಮವಾರ ಸಂಜೆ ನಡೆದ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಗೌಪ್ಯ ಮತದಾನ ಪ್ರಕ್ರಿಯೆ ತಡರಾತ್ರಿವರೆಗೂ ಮುಂದುವರಿಯಿತು. ರಹಸ್ಯ ಮತದಾನ ಮುಕ್ತಾಯದ ವೇಳೆಗೆ ಬೋರಿಸ್ ಜಾನ್ಸನ್ ಅವರ ಪರ 211 ಮತಗಳು ಚಲಾವಣೆಯಾದರೆ, ವಿರುದ್ಧ 148 ಮತಗಳು ಬಿದ್ದಿವೆ. ಅವಿಶ್ವಾಸ ಮತದಾನ ಪ್ರಕ್ರಿಯೆಲ್ಲಿ ಬೋರಿಸ್ ಜಾನ್ಸನ್ ಅವರು ಗೆಲುವು ಸಾಧಿಸುವ ಮೂಲಕ ಒಂದು ವರ್ಷದ ಮಟ್ಟಿಗೆ ತಮ್ಮ ಪಟ್ಟವನ್ನು ಭದ್ರಪಡಿಸಿಕೊಂಡಿದ್ದು, ಹೀಗಿದ್ದರೂ ಪ್ರಧಾನಿ ಪಟ್ಟ ಉಳಿಸಲು ಇನ್ನೂ ತೂಗುಗತ್ತಿಯಲ್ಲಿ ನಡೆಯಬೇಕಾಗಬಹುದು, ಯಾವ ಕ್ಷಣದಲ್ಲಿ ಬೇಕಾದರೂ ತಮ್ಮ ವಿರುದ್ಧ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಡೀ ದೇಶವೇ ಕೋವಿಡ್ ಕಾಯಿಲೆಯ ಭೀತಿ ಎದುರಿಸುತ್ತಿದ್ದ ಸಮಯದಲ್ಲಿ ಪ್ರಧಾನಿ ಜಾನ್ಸನ್ ಮಾತ್ರ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಪಾರ್ಟಿ ನಡೆಸುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ಔತಣಕೂಟದಲ್ಲಿ ಮದ್ಯ ಸೇವಿಸುತ್ತಿರುವ ಚಿತ್ರಗಳು ವೈರಲ್ ಆಗಿ ಇವರ ವಿರುದ್ಧ ಸ್ವಪಕ್ಷದ ಸದಸ್ಯರೇ ವಿರೋಧ ವ್ಯಕ್ತಪಡಿಸಿ ರಾಜೀನಾಮೆಗೆ ಆಗ್ರಹಿಸಿದ್ದರು. ವಿವಾದದ ಕುರಿತು ತಾನು ಎರಡೆರಡು ಬಾರಿ ಕ್ಷಮೆಯಾಚಿಸಿದ್ದರೂ ವಿವಾದ ತಣ್ಣಗಾಗಿರಲಿಲ್ಲ.

ಬೋರಿಸ್‌ ಜಾನ್ಸನ್ ಅವರ ಪಕ್ಷದೊಳಗಿನ ಅನೇಕರು ವಿವಾದಾತ್ಮಕ ನೀತಿಗಳನ್ನು ಸಮರ್ಥಿಸಿಕೊಳ್ಳಬೇಕಾಗಿರುವುದರಿಂದ ಸರ್ಕಾರದ ಪರ ಯು-ಟರ್ನ್ ಮಾಡಲು ಬೇಸತ್ತಿದ್ದಾರೆ. ಇಂಧನ ಸಂಸ್ಥೆಗಳ ಮೇಲೆ ವಿಂಡ್‌ಫಾಲ್ ತೆರಿಗೆಯನ್ನು ವಿರೋಧ ಪಕ್ಷದ ಲೇಬರ್ ಪಾರ್ಟಿ ಪ್ರಸ್ತಾಪಿಸಿತ್ತು. ನಂತರ ಈ ಪ್ರಸ್ತಾಪವನ್ನು ಅಳವಡಿಸಿಕೊಳ್ಳುವ ಮೊದಲು ಜಾನ್ಸನ್ ತಿರಸ್ಕರಿಸಿದರು. ಸರ್ಕಾರದ ವೆಚ್ಚದಲ್ಲಿನ ಹೆಚ್ಚಳವು ಕೆಲವು ಕನ್ಸರ್ವೇಟಿವ್‌ಗಳನ್ನು ಕೆರಳಿಸಿದ್ದು, ಇತರ ಸದಸ್ಯರು ಉತ್ತರ ಐರ್ಲೆಂಡ್‌ನ ಬ್ರೆಕ್ಸಿಟ್ ಒಪ್ಪಂದವನ್ನು ಕಿತ್ತುಹಾಕುವ ಅವರ ಯೋಜನೆಯು ಅವರ ಪಕ್ಷವು ಅಂತರರಾಷ್ಟ್ರೀಯ ಕಾನೂನನ್ನು ಮುರಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬೋರಿಸ್‌ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸದಸ್ಯರೇ ಸ್ವತಃ ಪ್ರಧಾನಿಯ ರಾಜೀನಾಮೆಗೆ ಬಹಿರಂಗವಾಗಿ ಆಗ್ರಹಿಸಿದ್ದು, ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಬ್ರಿಟನ್ ಸಂಸತ್‌ಗೆ ಮುಂದಿನ ಚುನಾವಣೆ 2024ರಲ್ಲಿ ನಡೆಯಲಿದ್ದು, ಅದಕ್ಕೂ ಮೊದಲೇ ಸರ್ಕಾರ ಬಿದ್ದು, ಚುನಾವಣೆ ನಡೆದರೂ ಅಚ್ಚರಿಯೇನಿಲ್ಲ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button