ಬೆಂಗಳೂರುರಾಜ್ಯ

ಬ್ಯಾಂಕ್‌ಗಳಿಗೆ ನಾಣ್ಯ ಭಾರ; ಕರ್ನಾಟಕದಲ್ಲಿ ಚಲಾವಣೆಯಾಗದೇ ಉಳಿದಿವೆ ಅಂದಾಜು 269 ಕೋಟಿ ನಾಣ್ಯ!

ಬೆಂಗಳೂರು: ಕೇಂದ್ರ ಸರಕಾರ ಟಂಕಿಸಿದ 10 ರೂ. ನಾಣ್ಯಗಳು ವದಂತಿಗೆ ಸಿಕ್ಕಿ ಬ್ಯಾಂಕ್‌ಗಳ ಪಾಲಿಗೆ ಭಾರವಾಗಿ ಪರಿಣಮಿಸಿವೆ.ಚಲಾವಣೆಗೆಂದು ಟಂಕಿಸಲಾದ ಕೋಟ್ಯಂತರ ನಾಣ್ಯಗಳು ಬ್ಯಾಂಕ್‌ಗಳಲ್ಲೇ ಕೊಳೆಯುತ್ತಿವೆ.

ಅಧಿಕೃತ ಚಲಾವಣೆಯಲ್ಲಿದ್ದರೂ ವದಂತಿಗಳ ಪ್ರಭಾವಕ್ಕೆ ಸಿಲುಕಿ ಬ್ಯಾಂಕ್‌ಗಳಲ್ಲೇ ಉಳಿದಿವೆ. ಪರಿಣಾಮ ‘ಕ್ಯಾಶ್‌ ಲಿಮಿಟ್‌’ ಮೀರಿ ಪ್ರತಿಯೊಂದು ಬ್ಯಾಂಕ್‌ಗಳು ಆರ್‌ಬಿಐಗೆ ದಂಡ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ.

2005ರಲ್ಲಿ ಟಂಕಿಸಿದ 10 ರೂ. ನಾಣ್ಯಕ್ಕೆ ಆರಂಭದಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನೋಟುಗಳಿಗೆ ಹರಿಯುವ ಭೀತಿ, ನಕಲಿಯ ಕಾಟವಿದೆ. ಆದರೆ, ನಾಣ್ಯಗಳಿಗೆ ಇಂತಹ ಸಮಸ್ಯೆಯೇ ಇಲ್ಲ. ಆದ್ದರಿಂದ, ಅಲ್ಪವಧಿಯಲ್ಲಿಯೇ ಜನಮೆಚ್ಚುಗೆ ವ್ಯಕ್ತವಾಯಿತು.

ಎಲ್ಲವೂ ಚೆನ್ನಾಗಿಯೇ ನಡೆಯುತಿತ್ತು. 2016ರಲ್ಲಿ ಕೇಳಿಬಂದ ವದಂತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಮಾಡಲಾದ ಅಪಪ್ರಚಾರಗಳಿಗೆ ಸಿಲುಕಿದ ’10 ರೂ.ನಾಣ್ಯ’ಗಳನ್ನು ಸ್ವೀಕರಿಸಲು ಜನ ಹಿಂದೇಟು ಹಾಕುತ್ತಿದ್ದಾರೆ.

2005, 2008, 2011 ಹಾಗೂ 2019ರಲ್ಲಿ ನಾಣ್ಯಗಳನ್ನು ಟಂಕಿಸಲಾಗಿದೆ. ಪ್ರಸ್ತುತ 2019ರ ಅಹಮದಾಬಾದ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌ನ ವಿದ್ಯಾರ್ಥಿ ವಿನ್ಯಾಸಗೊಳಿಸಿದ ನಾಣ್ಯ ಚಲಾವಣೆಯಲ್ಲಿದೆ.

ಯಾವುದೇ 10 ರೂ. ನಾಣ್ಯಗಳನ್ನು ರದ್ದುಪಡಿಸಿಲ್ಲ ಎಂದು ರಿಸರ್ವ್ ಬ್ಯಾಂಕ್ಆಫ್‌ ಇಂಡಿಯಾ(ಆರ್‌ಬಿಐ) ಕೂಡ ತಿಳಿಸಿದೆ. 2018ರಲ್ಲಿ ಈ ಬಗ್ಗೆ ಎಸ್‌ಎಂಎಸ್‌ಗಳನ್ನು ಕಳುಹಿಸುವ ಮೂಲಕ ಜಾಗೃತಿ ಅಭಿಯಾನವನ್ನು ಮಾಡಿತ್ತು. ಆದರೂ ಜನರ ಮನಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯವಾಗಿಲ್ಲ.

ಕ್ವಾಯಿನ್‌ ಏಜ್‌ ಆ್ಯಕ್ಟ್ 2011 ಅನ್ವಯ ನಾಣ್ಯಗಳನ್ನು ಟಂಕಿಸಲಾಗಿದೆ. ಭಾರತದಲ್ಲಿ ಇವುಗಳ ಚಲಾವಣೆಗೆ ಕಾನೂನಾತ್ಮಕ ಅಂಕಿತವೂ ಇದೆ. ಯಾವುದೇ ಕಾರಣಕ್ಕೂ ಯಾರೂ ಇದನ್ನು ಪಡೆಯಲು ಹಿಂದೇಟು ಹಾಕುವಂತಿಲ್ಲ. ಹಾಗೊಮ್ಮೆ ಬೇಡವೆಂದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ.

ಬ್ಯಾಂಕ್‌ಗಳಲ್ಲೇ ಉಳಿದ ನಾಣ್ಯಗಳುಕರ್ನಾಟಕದಲ್ಲಿ ಅಂದಾಜು 309 ಕೋಟಿ ನಾಣ್ಯಗಳು ಜನರ ಬಳಿ ಇದ್ದು, ಅಂದಾಜು 269 ಕೋಟಿ ನಾಣ್ಯಗಳು ಬ್ಯಾಂಕ್‌ಗಳಲ್ಲಿಯೇ ಉಳಿದುಕೊಂಡಿವೆ.

ಈ ನಾಣ್ಯಗಳನ್ನು ಪಡೆಯುವುದಕ್ಕೆ ಜನರು ಹಿಂದೇಟು ಹಾಕುತ್ತಿರುವುದರಿಂದ ಬ್ಯಾಂಕ್‌ಗಳಿಗೆ ತಂದೊಪ್ಪಿಸಲಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅಂದಾಜು 30-40 ಲಕ್ಷ ನಾಣ್ಯಗಳನ್ನು ಬ್ಯಾಂಕ್‌ಗಳಲ್ಲಿ ದಾಸ್ತಾನು ಮಾಡಲಾಗಿದೆ. ದಿನೇ ದಿನೆ ಇದರ ಪ್ರಮಾಣ ಹೆಚ್ಚುತ್ತಿರುವುದರಿಂದ ಬ್ಯಾಂಕ್‌ಗಳ ಮೇಲೆ ಹೊರೆಯಾಗುತ್ತಿದೆ.

ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿನಾಣ್ಯಗಳ ಚಲಾವಣೆ ಇದೆ. ಆದರೆ, ದಕ್ಷಿಣ ಭಾರತದ ಕೆಲವೆಡೆ ಮಾತ್ರ ವದಂತಿಗಳಿಂದಾಗಿ ನಾಣ್ಯ ಚಲಾವಣೆಗೆ ಹಿನ್ನಡೆಯಾಗಿದೆ.

10 ರೂ. ಮುಖಬೆಲೆಯ ನೋಟುಗಳನ್ನು ಅನಧಿಕೃತವಾಗಿ ಮುದ್ರಿಸಿ ಕಾಳಸಂತೆಯ ಮೂಲಕ ಚಲಾವಣೆಗೆ ತರಬಹುದು. ಆದರೆ, ನಾಣ್ಯಗಳ ವಿಚಾರದಲ್ಲಿ ಇದು ಕಷ್ಟಸಾಧ್ಯ.

ಒಂದುವೇಳೆ, ನಾಣ್ಯಗಳನ್ನು ಟಂಕಿಸಬೇಕಾದರೆ ಮುಖಬೆಲೆಗಿಂತ ಅಧಿಕ ಹಣ ಖರ್ಚಾಗುತ್ತದೆ. ಹಾಗೊಮ್ಮೆ ಟಂಕಿಸಿದರೂ ಅಂತಹವರಿಗೆ 6 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

10 ರೂ. ನಾಣ್ಯಗಳನ್ನು ಪಡೆಯುವುದಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ. ಬ್ಯಾಂಕ್‌ಗಳಲ್ಲೂ ನಾಣ್ಯಗಳನ್ನು ಸ್ವೀಕರಿಸಲಾಗುತ್ತಿದೆ. ಜನರು ವದಂತಿಗಳಿಗೆ ನಂಬುವ ಅಗತ್ಯವಿಲ್ಲ.

10 ರೂ. ನಾಣ್ಯ ಹಾಗೂ 1, 2 ಮತ್ತು 5 ರೂ. ಮುಖಬೆಲೆಯ ನೋಟುಗಳನ್ನು ಜನರು ಸ್ವೀಕರಿಸುತ್ತಿಲ್ಲ. ಹೀಗಾಗಿ, ಚಲಾವಣೆಗೆ ಹಿನ್ನಡೆಯಾಗಿದೆ.

ಕೆಎಸ್‌ಆರ್‌ಟಿಸಿಯವರು ಸ್ವೀಕರಿಸಿದರೂ ಅವರಿಂದ ಜನರು ಪಡೆಯುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹಾಗೂ ಸರಕಾರ ಜನರಲ್ಲಿ ಜಾಗೃತಿ ಮೂಡಿಸಬೇಕು.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button