ಅಪರಾಧಪೊಲೀಸ್ರಾಜ್ಯ

ಬೇನಾಮಿ ಆಸ್ತಿ ಮರಳಿಸುವಂತೆ ಹಾಕಿದ ಒತ್ತಡ ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆಗೆ ಕಾರಣ

ಹುಬ್ಬಳ್ಳಿ: ಕಲಿತ ವಾಸ್ತು ವಿದ್ಯೆಯಿಂದ ಬದುಕು ಕಟ್ಟಿಕೊಳ್ಳಲು ಬಿಡಲಿಲ್ಲ, ಕೊಟ್ಟ ಮಾತಿನಂತೆ ಹಣವನ್ನೂ ಗುರೂಜಿ ಕೊಡಲಿಲ್ಲ ಹಾಗೂ ಮಾರಿಕೊಂಡಿದ್ದ ಬೇನಾಮಿ ಆಸ್ತಿಗಾಗಿ ಪ್ರಮುಖ ಆರೋಪಿ ಮಹಾಂತೇಶ ಶಿರೂರ ಮೇಲೆ ಒತ್ತಡ ಹೇರಿದ್ದೇ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಅವರ ಜೀವಕ್ಕೆ ಮುಳುವಾಯಿತು ಎಂಬ ಅಂಶ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ

ಹುಬ್ಬಳ್ಳಿಯ ಸಣ್ಣ ಕೊಠಡಿಯೊಂದರಲ್ಲಿ ಸರಳ ವಾಸ್ತು ಕಚೇರಿ ಆರಂಭಗೊಂಡಾಗ ಗುರೂಜಿ ಜೊತೆಗೆ, ಐಟಿಐ ಓದಿಕೊಂಡಿದ್ದ ಮಹಾಂತೇಶ ಶಿರೂರ ಸೇರಿದಂತೆ ಐವರು ಜೊತೆಗಿದ್ದರು. ವ್ಯವಹಾರ ಹೆಚ್ಚಾಗಿ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆ ಸಂಸ್ಥೆಯ ಕಚೇರಿಗಳು ಆರಂಭಗೊಂಡು, ಗುರೂಜಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗುವುದರಲ್ಲಿ ಬಲಗೈ ಬಂಟ ಮಹಾಂತೇಶನ ಪಾತ್ರವಿತ್ತು. ಗುರೂಜಿ ನಂತರದ ಸ್ಥಾನದಲ್ಲಿದ್ದ ಆತ, ವಾಸ್ತು ವಿಷಯದಲ್ಲೂ ಪ್ರವೀಣನಾಗಿದ್ದ.

ಸಂಸ್ಥೆಯ ಜತೆಗೆ, ಗುರೂಜಿಯ ಆಸ್ತಿ ಮತ್ತು ಹಣದ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದ. ಗುರೂಜಿ ಅವನಿಗೆ ಮನೆ, ಓಡಾಡಲು ಕಾರು ಕೊಟ್ಟಿದ್ದರು. ನಂಬಿಕಸ್ಥನೆಂದು ಆತನ ಹೆಸರಿನಲ್ಲಿ ಬೇನಾಮಿ ಆಸ್ತಿ ಕೂಡ ಮಾಡಿದ್ದರು. ಕೈತುಂಬಾ ಸಂಬಳದ ಜತೆಗೆ ಐಷಾರಾಮಿ ಜೀವನಕ್ಕೆ ಬೇಕಿದ್ದ ಸೌಲಭ್ಯಗಳನ್ನು ಕೊಟ್ಟಿದ್ದರೂ, ಗ್ರಾಹಕರಿಂದ ಬರುತ್ತಿದ್ದ ಹಣದ ಲೆಕ್ಕವನ್ನು ಸರಿಯಾಗಿ ನೀಡದೆ ವಂಚಿಸುತ್ತಿದ್ದ. ಹುಬ್ಬಳ್ಳಿಯಲ್ಲಿ ವ್ಯವಸ್ಥಾಪಕನಾಗಿದ್ದ, ಆತನ ಸಹಚರ ಮತ್ತೊಬ್ಬ ಆರೋಪಿ ಮಂಜುನಾಥ ಮರೇವಾಡ ಕೂಡ ಇದರಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಹೇಳಿದರು.

ಚಿನ್ನದ ಸರ ಕೊಟ್ಟಿದ್ದರು

ಹಣ ವಂಚಿಸುತ್ತಿರುವ ವಿಷಯ ಗಮನಕ್ಕೆ ಬರುತ್ತಿದ್ದಂತೆ, ಮಹಾಂತೇಶ ಮತ್ತು ಆತನ ಆಪ್ತ ವಲಯದ ಮೇಲೆ ಗುರೂಜಿ ಕಣ್ಣಿಟ್ಟರು. ಈ ಪೈಕಿ, ಕೆಲವರ ಹೆಸರಿನಲ್ಲಿ ಮಾಡಿದ್ದ ಬೇನಾಮಿ ಆಸ್ತಿಯನ್ನು ಮಹಾಂತೇಶನ ಮೂಲಕವೇ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದರು. ನಂತರ ಆತನೂ ಕೆಲಸ ಬಿಡುವಂತೆ ಮಾಡಿದ್ದ ಗುರೂಜಿ, ಬೇನಾಮಿ ಆಸ್ತಿಯನ್ನು ತಮ್ಮ ಹೆಸರಿಗೆ ಮರಳಿಸಿದ ನಂತರ ಆತನಿಗೆ ದುಡ್ಡು ಕೊಡುವುದಾಗಿ ಮಾತು ಕೊಟ್ಟಿದ್ದರು.

ಬಲಗೈ ಬಂಟನನ್ನು ವಂಚನೆ ಕಾರಣಕ್ಕಾಗಿ ಕೆಲಸದಿಂದ ತೆಗೆಯುತ್ತಿರುವ ವಿಷಯ ಹೊರಗಡೆ ಗೊತ್ತಾಗಿ, ಸಂಸ್ಥೆ ಹೆಸರು ಕೆಡದಿರಲಿ ಎಂದು, ಆತನಿಗಾಗಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿದ್ದರು. ‘ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಮಹಾಂತೇಶ, ಇನ್ನು ಮುಂದೆ ಅಲ್ಲಿಯೇ ಬದುಕು ಕಟ್ಟಿಕೊಳ್ಳಲಿದ್ದಾನೆ’ ಎಂದು ಹೇಳಿ, ಚಿನ್ನದ ಸರವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ನಂತರ ಆತನ ಆಪ್ತರನ್ನು ಹಂತಹಂತವಾಗಿ ಕೆಲಸದಿಂದ ತೆಗೆದಿದ್ದರು. ಆಯಕಟ್ಟಿನ ಜಾಗಕ್ಕೆ ತಮ್ಮವರನ್ನು ನೇಮಿಸಿಕೊಂಡಿದ್ದರು.

ಸಂಸ್ಥೆಯಿಂದ ಹೊರಬಂದ ಮಹಾಂತೇಶ, ಸ್ವಂತವಾಗಿ ವಾಸ್ತು ವ್ಯವಹಾರ ನಡೆಸಲು ಮುಂದಾಗಿದ್ದ. ಆದರೆ, ಬೌದ್ಧಿಕ ಆಸ್ತಿ ಹಕ್ಕಿನ ಹೆಸರಿನಲ್ಲಿ ಗುರೂಜಿ ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಕಡೆಗೆ, ಆರೋಪಿ ಬೇನಾಮಿ ಆಸ್ತಿ ಮಾರಿ ಹಣ ಪಡೆದಿದ್ದ. ವಿಷಯ ತಿಳಿದ ಗುರೂಜಿ, ಅದಕ್ಕೆ ತಡೆ ತಂದರು. ಆಗ, ಖರೀದಿದಾರರು ಆಸ್ತಿಯ ಸಹವಾಸವೇ ಬೇಡ ಎಂದು ಹಣ ಮರಳಿಸುವಂತೆ ಆರೋಪಿ ಮೇಲೆ ಒತ್ತಡ ಹಾಕತೊಡಗಿದರು. ಅಷ್ಟೊತ್ತಿಗಾಗಲೇ ಆತ ಹಣವನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರ ವ್ಯವಹಾರಗಳಿಗೆ ಖರ್ಚು ಮಾಡಿಕೊಂಡಿದ್ದ. ಅಲ್ಲದೆ, ಗುರೂಜಿ ಈತನಿಗೆ ಹಣ ಕೊಟ್ಟಿರಲಿಲ್ಲ. ಇದೇ ವಿಷಯಕ್ಕೆ ಜಗಳ ನಡೆದಿತ್ತು. ಕೊನೆಗೆ ಸಹಚರ ಮಂಜುನಾಥನೊಂದಿಗೆ ಸೇರಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೋಟೆಲ್ ಸಿಬ್ಬಂದಿಗೆ ಎಡಿಜಿಪಿ ತರಾಟೆ

ಕೊಲೆ ನಡೆದ ದಿ ಪ್ರೆಸಿಡೆಂಟ್ ಹೋಟೆಲ್‌ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೋಟೆಲ್‌ನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ, ವಿದ್ಯಾನಗರ ಠಾಣೆಗೆ ಭೇಟಿ ನೀಡಿ ಪ್ರಕರಣದ ತನಿಖೆಯ ಕುರಿತು ಮಾಹಿತಿ ಪಡೆದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೃತ್ಯ ನಡೆದ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಸುರಕ್ಷತಾ ಕ್ರಮಗಳ ಲೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ಸೂಚಿಸಿದ್ದೇನೆ. ಗ್ರಾಹಕರ ಸುರಕ್ಷತೆಗಾಗಿ ಸ್ಟಾರ್ ಹೋಟೆಲ್‌ಗಳು ಮತ್ತು ಮಾಲ್‌ಗಳು ಮೆಟಲ್ ಡಿಟೆಕ್ಟರ್, ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆಯಂತಹ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಹಲವೆಡೆ ಇದು ಜಾರಿಯಾಗಿಲ್ಲ. ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಕುರಿತು ಪರಿಶೀಲನೆ ನಡೆಸಲಾಗುವುದು’ ಎಂದರು.

Related Articles

Leave a Reply

Your email address will not be published. Required fields are marked *

Back to top button