
ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಮಗನೇ ಸೀರೆಯಿಂದ ತಾಯಿಯ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಲಸಂದ್ರದ ನಿವಾಸಿ ಫಾತೀಮಾ ಮೇರಿ(50) ಮಗನಿಂದಲೇ ಕೊಲೆಯಾದ ತಾಯಿ. ಫಾತಿಮಾ ಮೇರಿ ಅವರು ತೋಟ ಗಳಲ್ಲಿ ಸೊಪ್ಪು ಹಾಗೂ ಮೇವು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಇವರ ಮಗ ದೀಪಕ್(26) ತಾಯಿಯ ಕೆಲಸದಲ್ಲಿ ನೆರವಾಗುತ್ತಿದ್ದ.
ಜೂ.1ರಂದು ಸಂಜೆ ಮೈಲಸಂದ್ರದ ತೋಟದಲ್ಲಿ ಸೊಪ್ಪು ಹಾಗೂ ಮೇವು ಸಂಗ್ರಹಕ್ಕಾಗಿ ತಾಯಿ-ಮಗ ಹೋಗಿದ್ದಾರೆ. ಸೊಪ್ಪು ಸಂಗ್ರಹಿಸುತ್ತಾ ತಾಯಿಗೆ ಮೊಬೈಲ್ ಕೊಡಿಸುವಂತೆ ದೀಪಕ್ ಕೇಳಿದ್ದಾನೆ. ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಫಾತಿಮಾ ಹೇಳಿದಾಗ ಕೋಪಗೊಂಡ ದೀಪಕ್ ಜಗಳವಾಡಿದ್ದಾನೆ.
ತಾಯಿ ಮಗನ ಮಧ್ಯೆ ಜಗಳ ವಿಕೋಪಕ್ಕೆ ಹೋದಾಗ ಕುತ್ತಿಗೆ ಹಿಸುಕಿ ಸೀರೆಯಿಂದಲೇ ಬಿಗಿದು ಕೊಲೆ ಮಾಡಿ ಆಕೆ ಬಳಿಯಿದ್ದ 700 ರೂ. ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಬಗ್ಗೆ ಬೇಗೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿ ದೀಪಕ್‍ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.