ರಾಜ್ಯ

ಬೆಳ್ಳಂಬೆಳಗ್ಗೆ ವಿಜಯಪುರದಲ್ಲಿ ಭೂಕಂಪನ, ಬೆಚ್ಚಿದ ಜನರು!

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಭಾರೀ ಸದ್ದಿನೊಂದಿಗೆ 4.6 ತೀವ್ರತೆಯ ಭೂಕಂಪನವಾಗಿದೆ.

ಬೆಳಗ್ಗೆ 6.22ರ ಸಮಯದಲ್ಲಿ 3 ರಿಂದ 4 ಸೆಕೆಂಡುಗಳ‌ ಕಾಲ ಭೂಮಿ ಕಂಪಿಸಿದೆ. ಇದಕ್ಕೂ ಮುನ್ನ ಬೆಳಗ್ಗೆ 5.40ರ ವೇಳೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಭೂಕಂಪನವಾಗಿದೆ.

ಇದ್ದಕ್ಕಿದ್ದಂತೆಯೇ ಭೂಮಿ ಕಂಪಿಸಿದ ಹೊಡೆತಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ 30 ವರ್ಷದ ಇತಿಹಾಸದಲ್ಲೇ ಇಷ್ಟು ಪ್ರಮಾಣದ ಭೂಮಿ ಕಂಪಿಸಿದ ಸದ್ದು ಆಗಿರಲಿಲ್ಲ.

ಭಾರೀ ಸದ್ದಿಗೆ ವಿಜಯಪುರ ನಗರದ ಜನತೆ ಬೆಚ್ಚಿಬಿದ್ದಿದೆ. ಭೂಮಿ ಕಂಪಿಸುತ್ತಿದ್ದಂತೆಯೇ ನೂರಾರು ಜನರು ಭಯಬಿದ್ದು ಮನೆಯಿಂದ ಹೊರಗೆ ಓಡಿಹೋಗಿದ್ದಾರೆ.

ವಿಜಯಪುರದ ರೈಲ್ವೆ ಸ್ಟೇಷನ್ ಪ್ರದೇಶ, ಗೋಳಗುಮ್ಮಟ ಪ್ರದೇಶ, ಗ್ಯಾಂಗಬಾವಡಿ, ಆಶ್ರಮ ಕಾಲೋನಿ, ಫಾರೇಖ ನಗರ, ಇಬ್ರಾಹಿಂಪುರ ಬಡಾವಣೆ, ಗಣೇಶ ನಗರ ಸೇರಿ ಹಲವು ಕಡೆ ಭೂಮಿ ಕಂಪಿಸಿದೆ.

ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಈ ನಡುವೆ ಭೂಕಂಪನವಾಗಿದೆ.ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದ ಶಬ್ದದೊಂದಿಗೆ ಭೂಕಂಪನ ಆಗಿರಲಿಲ್ಲವೆಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಭೂಮಿ ಕಂಪಿಸಿದ್ದಕ್ಕೆ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಪಾತ್ರೆ-ಪಗಡೆಗಳು ಕಳೆಗೆ ಬಿದ್ದಿದೆ. ಕಳೆದ ಹಲವು ತಿಂಗಳಿಂದ ಜಿಲ್ಲೆಯಲ್ಲಿ ಭೂಕಂಪನದ ಅನುಭವ ಆಗುತ್ತಿದ್ದು, ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.ಪಕ್ಕದ ಮಹಾರಾಷ್ಟ್ರದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.

ಮರಬಗಿ, ತಿಕ್ಕುಂಡಿ, ಜಾಲಿಹಾಳ ಮುಚ್ಚಂಡಿ ಸೇರಿ ಅನೇಕ ಪ್ರದೇಶಗಳಲ್ಲಿ ಸುಮಾರು 10-15 ಸೆಕೆಂಡುಗಳ ಕಾಲ ಭೂ ಕಂಪನ ಉಂಟಾಗಿದೆ ಎಂದು ವರದಿಯಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button