ಬೆಂಗಳೂರು ಹಳ್ಳಗುಂಡಿಗಳ ನಗರ

ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದೇ ಹೆಸರಾಗಿದ್ದ ಬೆಂಗಳೂರು ಇಂದು ಹಳ್ಳ ಗುಂಡಿಗಳ ನಗರವಾಗಿ ಮಳೆಯಿಂದ ಮುಳುಗುತ್ತಿರುವ ನಗರವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಮಾಜಿ ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಪ್ರಿಯಾಂಕ ಖರ್ಗೆ ಅವರು, ಬೆಂಗಳೂರು ಪ್ರಪಂಚದಲ್ಲೇ ವಿಜ್ಞಾನ-ತಂತ್ರಜ್ಞಾನದ ಕೇಂದ್ರವಾಗಿತ್ತು.
೨೦೧೫-೧೬ ರಲ್ಲಿ ಪ್ರಪಂಚದ ಡೈನಮಿಕ್ ಸಿಟಿಯಾಗಿ ಹೊರ ಹೊಮ್ಮಿತ್ತು. ಆದರೆ ಬೆಂಗಳೂರಿನ ಪರಿಸ್ಥತಿ ಬದಲಾಗಿದೆ. ರಸ್ತೆ, ಗುಂಡಿ ನಗರವಾಗಿ ಮಾದಕ ವಸ್ತುಗಳ ರಾಜಧಾನಿಯಾಗುತ್ತಿದೆ. ದಿನ ಬೆಳಗಾದರೆ ಮೈದಾನ, ಮಸೀದಿ, ದೇವಾಲಯ ವಿಚಾರವಾಗಿ ಟೆನ್ಷನ್ ಸಿಟಿಯಾಗಿ ಮಾರ್ಪಾಡಾಗುತ್ತಿದೆ ಎಂದು ದೂರಿದರು.ಬೆಂಗಳೂರಿನ ಈ ಅವ್ಯವಸ್ಥೆಯನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆ ಇದೆಯೇ ಎಂಬ ಅನುಮಾನ ಬರುತ್ತಿದೆ.
ಬೆಂಗಳೂರಿನ ಹೊಣೆಗಾರಿಕೆ ಯಾರದ್ದು, ಯಾರನ್ನು ಕೇಳಬೇಕು. ಮುಖ್ಯಮಂತ್ರಿಗಳು ಇಡೀ ರಾಜ್ಯವನ್ನು ನೋಡಬೇಕು. ಕೇವಲ ಬೆಂಗಳೂರನ್ನು ಮಾತ್ರ ನೋಡಲು ಆಗುವುದಿಲ್ಲ. ಆದರೂ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ನೀಡಿಲ್ಲ.
ಇದಕ್ಕೆ ಕಾರಣ ಬಿಜೆಪಿಯಲ್ಲಿನ ಅಧಿಕಾರದ ಆಂತರಿಕ ಗುದ್ದಾಟ ಎಂದು ಟೀಕಿಸಿದರು.೫ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದ ಬೆಂಗಳೂರು ಇಂದು ಈ ರೀತಿ ಕುಖ್ಯಾತಿ ಪಡೆಯುತ್ತಿರುವುದೇಕೆ ಎಂದು ಬೆಂಗಳೂರಿಗರ ಪರವಾಗಿ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನಿಸಲು ಬಯಸಿದೆ ಎಂದ ಅವರು, ಅಧಿಕಾರಿಗಳನ್ನು ಇಲ್ಲಿ ಕೂರಿಸಿರುವುದು ಆಡಳಿತ ಮಾಡಲು ಅಲ್ಲ, ಬಿಜೆಪಿಗೆ ಹಣ ಮಾಡಿಕೊಡಲು ಎಂದು ಆರೋಪಿಸಿದರು.
ದುರಾಡಳಿತದಿಂದ ಬೆಂಗಳೂರು ದುಸ್ಥಿತಿಗೆ ತಲುಪಿದೆ. ಶೇ. ೪೦ ರಷ್ಟು ಕಮೀಷನ್ ಕಾರಣದಿಂದ ಬೆಂಗಳೂರು ಮುಳುಗುತ್ತಿರುವ ನಗರವಾಗಿದೆ. ಬಿಬಿಎಂಪಿ ಗುತ್ತಿಗೆದಾರರು ಹೇಳುವಂತೆ ಶೇ. ೫೦ ರಷ್ಟು ಲಂಚ ನೀಡಿ ನಿರ್ಮಿಸಿದ ರಸ್ತೆಗಳು, ಮೇಲ್ಸೇತುವೆಗಳು ಹೇಗೆ ಬಾಳಿಕೆ ಬರಲು ಸಾಧ್ಯ ಎಂದು ಹರಿಹಾಯ್ದರು.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತದಿಂದ ಬೆಂಗಳೂರಿಗೆ ಕುಖ್ಯಾತಿ ಬಂದಿದೆ. ಕಾಮಗಾರಿಗಳ ಕಮೀಷನ್ ಬಗ್ಗೆ ಉಡಾಫೆಯಿಂದ ಮಾತನಾಡುವವರಿಗೆ ಬೆಂಗಳೂರಿನ ಪರಿಸ್ಥಿತಿ ಅರಿವಾಗಿಲ್ಲವೇ ಎಂದರು.ಬಿಜೆಪಿಯ ಸಚಿವರು, ಶಾಸಕರುಗಳು ಲೂಟಿ ಮಾಡುತ್ತಿದ್ದಾರೆ. ಒಂದೇ ಕೆಲಸಕ್ಕೆ ಎರಡೆರಡು ಬಿಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಗುತ್ತಿಗೆದಾರರು ಕಮೀಷನ್ ವ್ಯವಹಾರದ ಬಗ್ಗೆ ಪತ್ರ ಬರೆದರೆ ತನಿಖೆ ಮಾಡಿಸದ ಮುಖ್ಯಮಂತ್ರಿಗಳು ದಾಖಲೆ ಕೊಡಿ ಎಂದು ಕೇಳುತ್ತಾರೆ.
ಭ್ರಷ್ಟಾಚಾರಕ್ಕೆ ದಾಖಲೆ ಕೊಡಲು ಸಾಧ್ಯವೇ. ದಾಖಲೆ ಬೇಕು ಎಂದರೆ ಭ್ರಷ್ಟಾಚಾರಕ್ಕೆ ರಸೀದಿ ಹಾಕುವ ಕಾನೂನು ತರಲಿ. ಆಗ ದಾಖಲೆಗಳನ್ನು ಕೊಡುತ್ತೇವೆ ಎಂದು ವ್ಯಂಗ್ಯವಾಡಿದರು.