ಅಪರಾಧಬೆಂಗಳೂರು

ಬೆಂಗಳೂರು: ಕಾರು-ಮೊಬೈಲ್‌ಗಾಗಿ ಕರುಳ ಕುಡಿಯನ್ನು ಕೊಂದು ನೇಣಿಗೆ ಕೊರಳೊಡ್ಡಿದ ದಂತ ವೈದ್ಯೆ!

ಬೆಂಗಳೂರು: ಪತಿಯ ಜತೆಗಿನ ಸಣ್ಣ ಮುನಿಸು ಮತ್ತು ತಾಯಿಯ ಅಕಾಲಿಕ ಸಾವು ದಂತ ವೈದ್ಯೆ ಶೈಮಾ (39) ಆವರನ್ನು ಆತ್ಮಹತ್ಯೆಯ ಕೂಪಕ್ಕೆ ದೂಡಿತೇ ಎಂಬ ಅನುಮಾನ ಪೊಲೀಸರನ್ನು ಕಾಡಲಾರಂಭಿಸಿದೆ.

ಬನಶಂಕರಿ 2ನೇ ಹಂತದ ಕಾವೇರಿನಗರ ನಿವಾಸಿಯಾದ ಶೈಮಾ ಅವರು ಆ.6ರಂದು ಮಗಳು ಆರಾಧನಾಳನ್ನು ನೇಣು ಹಾಕಿ ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊಡಗು ಜಿಲ್ಲೆ ವಿರಾಜಪೇಟೆಯ ಶೈಮಾ, ಕೋಲಾರ ಜಿಲ್ಲೆಯ ದಂತ ವೈದ್ಯ ಡಾ.ನಾರಾಯಣ್‌ ಎಂಬುವರನ್ನು 12 ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದರು.

ದಂಪತಿಗೆ ಆರಾಧನಾ ಒಬ್ಬಳೇ ಮಗಳು.ಶೈಮಾ ದಂಪತಿ ಹನುಮಂತನಗರದಲ್ಲಿ ಕ್ಲಿನಿಕ್‌ ನಡೆಸುತ್ತಿದ್ದರು. ನಾರಾಯಣ್‌, ಕೆಲ ವರ್ಷಗಳ ಹಿಂದೆ ಬ್ಯಾಂಕ್‌ನಲ್ಲಿ ವಾಹನ ಸಾಲ ಪಡೆದು ಹೊಸ ಕಾರು ಖರೀದಿಸಿದ್ದರು. ಶೈಮಾ ಸಹ ತಮಗೆ ಹೊಸ ಕಾರು ಮತ್ತು ಮೊಬೈಲ್‌ ಕೊಡಿಸುವಂತೆ ಪತಿಗೆ ಒತ್ತಾಯಿಸುತ್ತಿದ್ದರು.

ಆದರೆ, ಹಣಕಾಸಿನ ಸಮಸ್ಯೆ ಕಾರಣಕ್ಕೆ ನಾರಾಯಣ್‌, ಪತ್ನಿಗೆ ಕಾರು ಮತ್ತು ಮೊಬೈಲ್‌ ಕೊಡಿಸಿರಲಿಲ್ಲ. ಈ ವಿಚಾರವಾಗಿ ಶೈಮಾ, ಪತಿಯ ವಿರುದ್ಧ ಮುನಿಸಿಕೊಂಡು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಿದೆ.

ವಿರೋಧದ ನಡುವೆ ಮದುವೆದಂತ ವೈದ್ಯಕೀಯ ಶಿಕ್ಷಣ ಪೂರೈಸಿದ ನಂತರ ಶೈಮಾ, ವೃತ್ತಿ ಸಂಬಂಧಿ ತರಬೇತಿಗಾಗಿ ನಾರಾಯಣ್‌ ಅವರ ಹನುಮಂತನಗರ ಕ್ಲಿನಿಕ್‌ಗೆ ಬಂದಿದ್ದರು. ಆಗ ಅವರಿಬ್ಬರೂ ಪರಿಚಿತರಾಗಿದ್ದರು. ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಪರಸ್ಪರರ ನಡುವೆ ಪ್ರೇಮಾಂಕುರವಾಗಿತ್ತು.

ಬಳಿಕ ಶೈಮಾ, ಪೋಷಕರ ವಿರೋಧದ ನಡುವೆಯೂ ನಾರಾಯಣ್‌ ಅವರನ್ನು ಮದುವೆಯಾಗಿದ್ದರು. ಬಳಿಕ ಬೆಂಗಳೂರಿನಲ್ಲೇ ನೆಲೆಯೂರಿದ ದಂಪತಿ ಬದುಕು ಕಟ್ಟಿಕೊಂಡಿದ್ದರು. ಶೈಮಾ ಕೂಡ ಹನುಮಂತನಗರದ ಕ್ಲಿನಿಕ್‌ನಲ್ಲೇ ಕೆಲಸ ಮಾಡುತ್ತಿದ್ದರು.

ಕುಟುಂಬದ ವಿರೋಧ ಲೆಕ್ಕಿಸದೆ ಅಂತರ್ಜಾತಿ ವಿವಾಹವಾಗಿದ್ದ ಶೈಮಾರನ್ನು ಪೋಷಕರು ಸುಮಾರು 12 ವರ್ಷ ಮನೆಗೆ ಸೇರಿಸಿರಲಿಲ್ಲ. ಈ ಮಧ್ಯೆ, ಶೈಮಾ ತಾಯಿ ಆತ್ಮಹತ್ಯೆ ಮಾಡಿಕೊಂಡರು. ಆಗಲೂ ಶೈಮಾ ಅವರಿಗೆ ತಾಯಿಯ ಅಂತಿಮ ದರ್ಶನ ಪಡೆಯಲು ಕುಟುಂಬ ಸದಸ್ಯರು ಅವಕಾಶ ಕೊಟ್ಟಿರಲಿಲ್ಲ.

12 ವರ್ಷಗಳ ನಂತರ ಇತ್ತೀಚೆಗೆ ಮೇ ತಿಂಗಳಲ್ಲಿ ಶೈಮಾ ತವರು ಮನೆಗೆ ಹೋಗಿ ಬಂದಿದ್ದರು. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದ ಶೈಮಾಗೆ ಕಳೆದ ಕೆಲ ದಿನಗಳಿಂದ ಪತಿಯ ಬಗ್ಗೆ ಅಸಹನೆ ಮೂಡಿತ್ತು.

ಕೌಟುಂಬಿಕ ಬಹಿಷ್ಕಾರ, ತಾಯಿಯ ಸಾವು, ಪತಿಯ ಜತೆಗಿನ ಸಣ್ಣ ಮನಸ್ತಾಪದಿಂದ ಖಿನ್ನರಾಗಿದ್ದ ಶೈಮಾ, ಪತಿಯ ಬಳಿ ಪದೇಪದೇ ಆತ್ಮಹತ್ಯೆಯ ವಿಚಾರ ಪ್ರಸ್ತಾಪಿಸುತ್ತಿದ್ದರು. ಆದರೆ, ನಾರಾಯಣ್‌ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೆಮ್ಮಿನ ಸಿರಪ್‌ ಕುಡಿಸಿ ನೇಣಿನ ಕುಣಿಕೆ ಬಿಗಿದಳುಆರಾಧನಾ, ಬನಶಂಕರಿ 2ನೇ ಹಂತದ ಖಾಸಗಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದಳು. ಆ.6ರಂದು ಶಾಲೆಗೆ ರಜೆಯಿದ್ದ ಕಾರಣ ಆಕೆ ತಾಯಿಯ ಜತೆ ಮನೆಯಲ್ಲೇ ಇದ್ದಳು.

ನಾರಾಯಣ್‌, ಬೆಳಗ್ಗೆ 8.30ಕ್ಕೆ ಕ್ಲಿನಿಕ್‌ಗೆ ಹೋಗಿದ್ದರು. ಬಳಿಕ ಘಟನೆ ನಡೆದಿತ್ತು. ನೇಣು ಹಾಕುವ ವೇಳೆ ಮಗಳು ಪ್ರತಿರೋಧ ತೋರಬಹುದೆಂಬ ಕಾರಣಕ್ಕೆ ಶೈಮಾ, ಅರಾಧನಾಗೆ ಕೆಮ್ಮಿನ ಸಿರಪ್‌ ಅನ್ನು ನಿಗದಿತ ಮಿತಿಗಿಂತಲೂ ಹೆಚ್ಚು ಕುಡಿಸಿದ್ದರು.

ಇದರಿಂದ ಆರಾಧನಾಗೆ ಮಂಪರು ಬಂದು ನಿದ್ದೆಗೆ ಜಾರಿದಾಗ ಶೈಮಾ, ಆಕೆಯ ಕುತ್ತಿಗೆಗೆ ದುಪಟ್ಟಾ ಬಿಗಿದು ನೇಣು ಹಾಕಿದ್ದಾರೆ. ನಂತರ ಅವರೂ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಸಮಯ 10.45 ಆದರೂ ಕ್ಲಿನಿಕ್‌ಗೆ ಬಾರದ ಕಾರಣ ನಾರಾಯಣ್‌ ಪತ್ನಿಯ ಮೊಬೈಲ್‌ಗೆ ಹಲವು ಬಾರಿ ಕರೆ ಮಾಡಿದ್ದರು. ಆದರೆ, ಶೈಮಾ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ನಾರಾಯಣ್‌, ಕ್ಲಿನಿಕ್‌ನ ಕೆಲಸಗಾರನನ್ನು ತಮ್ಮ ಮನೆಯ ಬಳಿ ಕಳುಹಿಸಿದ್ದರು. ಬಾಗಿಲು ಬಡಿದರೂ ಶೈಮಾ ಬಾಗಿಲು ತೆರೆದಿರಲಿಲ್ಲ. ಬಳಿಕ ಬಾಗಿಲು ಮುರಿದು ಒಳ ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಬಾಗಿಲಿಗೆ ಒಳಗಿನಿಂದಲೇ ಚಿಲಕ ಹಾಕಿಕೊಂಡು ಕೃತ್ಯಶೈಮಾ ಅವರ ಸಹೋದರ ಡಾ.ಶರತ್‌, ತಂಗಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ಕೊಟ್ಟಿದ್ದಾರೆ. ಆದರೆ, ಘಟನೆ ದಿನ ಶೈಮಾ ಅವರು ಮನೆಯ ಒಳ ಭಾಗದಿಂದ ಬಾಗಿಲ ಚಿಲಕ ಹಾಕಿಕೊಂಡಿದ್ದರು. ಅಪರಿಚಿತ ವ್ಯಕ್ತಿಗಳು ಬಲವಂತವಾಗಿ ಬಾಗಿಲು ತೆರೆಸಿ ಮನೆಯನ್ನು ಪ್ರವೇಶಿಸಿರುವ ಕುರುಹುಗಳಿಲ್ಲ.

ಶೈಮಾ ಮತ್ತು ನಾರಾಯಣ್‌ರ ಮೊಬೈಲ್‌ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಮೃತರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button