
ಪ್ರಮುಖ ಮತ್ತು ಮುಖ್ಯ ರಸ್ತೆಗಳಲ್ಲಿನ 2,010 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದ್ದು, ಉಳಿದ 221 ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಆದಷ್ಟು ಬೇಗ ಮುಚ್ಚಲಾಗುವುದು. ನಗರದ 472 ಕಿಲೋ ಮೀಟರ್ ಉಪ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಟೆಂಡರ್ ಕರೆಯಲಾಗಿದ್ದು, 2023ರ ಜನವರಿ 31ರೊಳಗೆ ದುರಸ್ತಿಗೊಳಿಸಲಾಗುವುದು ಎಂದು ಬಿಬಿಎಂಪಿ ಹೈಕೋರ್ಟ್‌ಗೆ ತಿಳಿಸಿದೆ.
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತಂತೆ ಕೋರಮಂಗಲದ ವಿಜಯ್ ಮೆನನ್ ಸಲ್ಲಿಸಿದ್ದ ಪಿಐಎಲ್ ಹಂಗಾಮಿ ಸಿಜೆ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತು.
ಆಗ ಪಾಲಿಕೆ ಪರ ವಕೀಲರು, ‘ಈಗಾಗಲೇ ಮುಖ್ಯ ರಸ್ತೆಗಳಲ್ಲಿನ ಎಲ್ಲ ಗುಂಡಿಗಳನ್ನು ಹಂತ – ಹಂತವಾಗಿ ಮುಚ್ಚಲಾಗುತ್ತಿದೆ. ಇನ್ನೂ 221 ಗುಂಡಿಗಳನ್ನು ಮುಚ್ಚಬೇಕಾಗಿದ್ದು, ಅವುಗಳನ್ನು ಹಾಟ್‌ಮಿಕ್ಸ್ ತಂತ್ರಜ್ಞಾನ ಬಳಸಿ ಮುಂದಿನ ಹತ್ತು ದಿನಗಳಲ್ಲಿ ಮುಚ್ಚಲಾಗುವುದು’ ಎಂದರು.
ಅಲ್ಲದೆ, ನಗರದ 427.12 ಕಿ. ಮೀ. ಉಪ ರಸ್ತೆಗಳ ರಿಪೇರಿ ಮತ್ತು ಡಾಂಬರೀಕರಣ ಕಾರ್ಯಕ್ಕೆ ಟೆಂಡರ್ ನೀಡಲಾಗಿದೆ. ಅದರಲ್ಲಿ ಕೆಲ ಕೆಲಸಗಳು 2023ರ ಜನವರಿ 31ರ ಒಳಗೆ ಪೂರ್ಣಗೊಳ್ಳಲಿವೆ. ಇನ್ನು ಪಾಲಿಕೆಯ ಎಂಟು ವಲಯಗಳ ವಾರ್ಡ್ ಮಟ್ಟದಲ್ಲಿ
ಒಟ್ಟು 2,500 ಕಿ. ಮೀ. ರಸ್ತೆಗಳ ಗುಂಡಿ ಮುಚ್ಚುವ, ರಸ್ತೆ ರಿಪೇರಿ ಮತ್ತು ಡಾಂಬರೀಕರಣ ಕಾರ್ಯವನ್ನು 2023ರ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಲಾಗುವುದು’ ಎಂದು ಬಿಬಿಎಂಪಿ ಪರ ವಕೀಲರು ವಿವರಿಸಿದರು.
ಗುಂಡಿ ಮುಕ್ತ ರಸ್ತೆ ಬಯಸುವುದು ನಾಗರಿಕರ ಹಕ್ಕು: ಆಗ ನ್ಯಾಯಪೀಠ ‘ನಗರದಲ್ಲಿ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ಅವುಗಳನ್ನು ನಿರ್ವಹಣೆ ಮಾಡುವುದು ಶಾಸನ ಬದ್ಧ ಸಂಸ್ಥೆಯಾದ ಬಿಬಿಎಂಪಿ ಜವಾಬ್ದಾರಿ.
ಗುಂಡಿ ಮುಕ್ತ ರಸ್ತೆ ಹೊಂದುವ ಹಕ್ಕು ನಾಗರಿಕರಿಗಿದೆ. ಸಾಕಷ್ಟು ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿವೆ.
ಅದರಿಂದ ದ್ವಿಚಕ್ರ ವಾಹನ ಸವಾರರಿಗೆ ಅಪಾಯವಿದೆ. ಅವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ಪಾಲಿಕೆಯ ಕರ್ತವ್ಯವಾಗಿದೆ’ ಎಂದು ಹೇಳಿತು.
ಅಂತಿಮವಾಗಿ 221 ಗುಂಡಿಗಳನ್ನು ಮುಚ್ಚುವ ಕಾಮಗಾರಿ ಬಗ್ಗೆ ಅನುಪಾಲನಾ ವರದಿ ಮತ್ತು ಫೋಟೊಗಳನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು’ ಎಂದು ಆದೇಶ ನೀಡಿತು.
ಬೆಂಗಳೂರು ನಗರದ ರಸ್ತೆಗುಂಡಿಗಳಿಗೆ ಬಿಜೆಪಿ ಸರ್ಕಾರವೇ ಕಾರಣ: ರಾಮಲಿಂಗಾ ರೆಡ್ಡಿರಸ್ತೆ ಗುಂಡಿಗಳ ಬಗ್ಗೆ ಸ್ವೀಕರಿಸಿದ ದೂರುಗಳನ್ನು ಪರಿಹರಿಸಿದ ನಂತರ ಆ ಬಗ್ಗೆ ಪೋಟೋಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ದೂರು ಪರಿಹಾರ ವ್ಯವಸ್ಥೆಯ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿತು.
ದೂರು ಪರಿಹಾರ ವ್ಯವಸ್ಥೆಯ ಬಗ್ಗೆ ಕಿಡಿ: ಮಳೆ ನೀರು ಪ್ರವಾಹದಿಂದ ನಗರದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಲು ಕುಂದು ಕೊರತೆ ಪರಿಹಾರ ಕೇಂದ್ರ ಆರಂಭಿಸಲು ಹೈಕೋರ್ಟ್ ಕಳೆದ ವಿಚಾರಣೆ ವೇಳೆ ನಿರ್ದೇಶನ ನೀಡಿತ್ತು.
ಅದರಂತೆ ಕುಂದುಕೊರತೆ ನಿವಾರಣೆಗೆ ವೆಬ್‌ಸೈಟ್ ಆರಂಭಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿತು.
ಅದನ್ನು ಪರಿಶೀಲಿಸಿದ ನ್ಯಾಯಪೀಠ, ‘ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಕೆಲ ದೂರವಾಣಿ ಸಂಖ್ಯೆಯಲ್ಲಿ 9 ಸಂಖ್ಯೆ ಮಾತ್ರ ಇದೆ.
ಮತ್ತಷ್ಟು ಸಂಖ್ಯೆಗಳು ಕಾರ್ಯ ನಿರ್ವಹಿಸುತ್ತಲೇ ಇಲ್ಲ. ಕುಂದುಕೊರತೆ ಪರಿಹರಿಸುವ ರೀತಿ ಹೀಗೇನಾ?’ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು.