ರಾಜ್ಯ

ಬೆಂಗಳೂರಿನಿಂದ ಕಾಶಿಗೆ ತೆರಳಬೇಕೇ! ಕರ್ನಾಟಕ ಸರ್ಕಾರದಿಂದ ವಿಶೇಷ ವ್ಯವಸ್ಥೆ

ಭಾರತ್ ಗೌರವ್ ತೀರ್ಥಯಾತ್ರೆ ರೈಲು: ಕರ್ನಾಟಕ ಜನತೆಗೆ ಶುಭ ಸುದ್ದಿಯೊಂದಿದೆ. ಅದರಲ್ಲೂ ಕಾಶೀ ಯಾತ್ರೆ ಮಾಡುವ ಆಸೆ ನಿಮಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಬೆಂಗಳೂರಿನಿಂದ ಕಾಶಿಗೆ ತೆರಳಲು ಇಚ್ಛಿಸುವವರಿಗೆ ವಿಶೇಷ ರೈಲು ಆರಂಭವಾಗಲಿದೆ.

ಒಟ್ಟು ಏಳು ದಿನಗಳ ಈ ಧಾರ್ಮಿಕ ಯಾತ್ರೆಯಲ್ಲಿ ಭಕ್ತಾದಿಗಳು ಉತ್ತರ ಭಾರತದ ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಯಾವುದೀ ರೈಲು, ಇದರಿಂದ ಏನೆಲ್ಲಾ ಅನುಕೂಲಗಳಿವೆ, ರೈಲಿನಲ್ಲಿ ಪ್ರಯಾಣಿಸಲು ಎಷ್ಟು ಹಣ ಖರ್ಚಾಗುತ್ತೆ ಎಂಬಿತ್ಯಾದಿ ಮಾಹಿತಿಗಳ ಬಗ್ಗೆ ಇಲ್ಲಿದೆ ವಿವರ…

ವಾಸ್ತವವಾಗಿ, ಭಾರತ ಸರ್ಕಾರವು ದೇಶದಲ್ಲಿ ತೀರ್ಥಯಾತ್ರೆಯನ್ನು ಉತ್ತೇಜಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಕಾರ್ಯದಲ್ಲಿ ರಾಜ್ಯ ಸರ್ಕಾರಗಳೂ ಸಹ ಕೇಂದ್ರ ಸರ್ಕಾರದ ಜೊತೆ ಕೈ ಜೋಡಿಸಿವೆ. ಇದೀಗ ಕಾಶಿ ಯಾತ್ರೆಗೆ ತೆರಳಲು ಇಚ್ಚಿಸುವ ಕರ್ನಾಟಕದ ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನಿಂದ ಹೊಸ ರೈಲು ವ್ಯವಸ್ಥೆ ಮಾಡಲಾಗಿದೆ.

ಹೌದು, ಬೆಂಗಳೂರಿನಿಂದ ಕಾಶಿಗೆ ತೆರಳಲು ಹೊಸ ರೈಲು ಸೇವೆ ಆರಂಭವಾಗಲಿದೆ. ಅದೇ ‘ಭಾರತ್ ಗೌರವ್’ ತೀರ್ಥಯಾತ್ರೆ ರೈಲು.

ಈ ರೈಲಿನಲ್ಲಿ ಉತ್ತರ ಭಾರತದ ಪ್ರಮುಖ ಯಾತ್ರಾ ಸ್ಥಳಗಳಿಗೆ ಭೇಟಿ ನೀಡಬಹುದು. ಈ ರೈಲು ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿನಿಂದ ವಾರಣಾಸಿಗೆ ಹೊರಡಲಿದೆ ಎಂದು ಕರ್ನಾಟಕದ ಧಾರ್ಮಿಕ ದತ್ತಿ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಸೋಮವಾರ (ಜುಲೈ 11) ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಿಂದ ಚಲಿಸಲಿರುವ ‘ಭಾರತ್ ಗೌರವ್’ ತೀರ್ಥಯಾತ್ರೆ ರೈಲು: ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕದ ಧಾರ್ಮಿಕ ದತ್ತಿ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ, ಜೀವನದಲ್ಲಿ ಒಮ್ಮೆಯಾದರೂ ಕಾಶಿಗೆ ಭೇಟಿ ನೀಡಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ನನಗೂ ರಾಜ್ಯದಿಂದ ಇಂಥದೊಂದು ಪಯಣ ಆರಂಭಿಸಬೇಕೆಂಬ ಆಸೆ ಇತ್ತು, ಅದು ಈಗ ಈಡೇರಿದೆ.

ಈ ರೈಲು ಪ್ರಯಾಣವನ್ನು ಪ್ರಾರಂಭಿಸುವ ಆಲೋಚನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದರು. ಇದೀಗ ಅವರ ಮತ್ತು ರೈಲ್ವೇಯ ನೆರವಿನಿಂದ ಈ ಪಯಣ ಆರಂಭವಾಗಲಿದೆ.

ರಾಜ್ಯದ ಕಡೆಯಿಂದ ತೀರ್ಥಯಾತ್ರೆ ಪ್ಯಾಕೇಜ್ ಸಿದ್ಧಪಡಿಸುವುದರೊಂದಿಗೆ ಅತಿ ಕಡಿಮೆ ವೆಚ್ಚದಲ್ಲಿ ‘ಭಾರತ ಗೌರವ ತೀರ್ಥಯಾತ್ರೆ ರೈಲು’ ಸೇವೆ ಆರಂಭಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ ಎಂದರು.

ಒಟ್ಟು ಏಳು ದಿನಗಳ ಪ್ರಯಾಣ:ಇದು ಒಟ್ಟು ಏಳು ದಿನಗಳ ಧಾರ್ಮಿಕ ಯಾತ್ರೆ ಎಂದು ತಿಳಿಸಿರುವ ಸಚಿವೆ ಶಶಿಕಲಾ ಜೊಲ್ಲೆ, ಈ ಪ್ರವಾಸವು ಹೋಗುವುದು-ಬರುವುದು ಎರಡನ್ನೂ ಒಳಗೊಂಡಿರುತ್ತದೆ. ಈ ಪ್ರಯಾಣದಲ್ಲಿ 4,161 ಕಿ.ಮೀ ದೂರ ಕ್ರಮಿಸಲಾಗುವುದು.

ಈ ರೈಲಿನಲ್ಲಿ (ಭಾರತ್ ಗೌರವ್ ತೀರ್ಥಯಾತ್ರೆ ರೈಲು) ಒಟ್ಟು 14 ಕೋಚ್‌ಗಳು ಇರಲಿದ್ದು, ಈ ಪೈಕಿ 11 ಬೋಗಿಗಳು ಪ್ರಯಾಣಕ್ಕಾಗಿ ಇರುತ್ತವೆ.

ಪ್ರತಿ ಕೋಚ್‌ನಲ್ಲಿ ರಾಜ್ಯದ ಪ್ರಮುಖ ದೇವಾಲಯಗಳ ಕಲಾಕೃತಿಗಳನ್ನು ಮಾಡಲಾಗುವುದು. ಜನರ ಪೂಜೆಗಾಗಿ ಬೋಗಿಯನ್ನು ದೇವಸ್ಥಾನವನ್ನಾಗಿ ಪರಿವರ್ತಿಸಲಾಗಿದೆ. ಯಾತ್ರಾ ಕೇಂದ್ರಗಳ ಬಳಿ ಆಹಾರ, ನೀರು, ವಸತಿ ಮತ್ತು ಸ್ಥಳೀಯ ಸಾರಿಗೆಗೆ ರೈಲ್ವೆ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.

ಧಾರ್ಮಿಕ ಯಾತ್ರೆಗೆ ತಗಲುವ ವೆಚ್ಚ:ಕರ್ನಾಟಕದ ಜನತೆಗೆ ಕಾಶಿ ಯಾತ್ರೆಗೆ ಅನುಕೂಲವಾಗುವಂತೆ ಈ ಸೇವೆಯನ್ನು ಆರಂಭಿಸಲು ಭಾರತೀಯ ರೈಲ್ವೆಯಿಂದ ಒಂದು ಕೋಟಿ ರೂಪಾಯಿ ಬ್ಯಾಂಕ್ ಗ್ಯಾರಂಟಿ ನೀಡಿ ರೈಲನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಈ ಪ್ರಯಾಣಕ್ಕೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲಾಗುವುದು. ಏಳು ದಿನಗಳ ಪ್ರವಾಸದ ವೆಚ್ಚ 15,000 ರೂಪಾಯಿಗಳಾಗಿದ್ದು, ಇದರಲ್ಲಿ ಕರ್ನಾಟಕ ಸರ್ಕಾರ 5,000 ರೂಪಾಯಿಗಳ ಸಹಾಯಧನವನ್ನು ನೀಡುತ್ತದೆ.

ಇದೇ ವೇಳೆ ಭಕ್ತರು 10 ಸಾವಿರ ರೂ. ನೀಡಿ ಈ ಯಾತ್ರೆಗೆ ಬುಕ್ಕಿಂಗ್ ಮಾಡಬಹುದಾಗಿದೆ. ಭಾರತ್ ಗೌರವ್ ತೀರ್ಥಯಾತ್ರೆ ರೈಲಿಗೆ ಬುಕ್ಕಿಂಗ್ ಅನ್ನು ಈಗಾಗಲೇ ಆರಂಭಿಸಲಾಗಿದೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button