ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಆ್ಯಸಿಡ್ ದಾಳಿ

ಇತ್ತೀಚೆಗೆ ನಡೆದ ಆ್ಯಸಿಡ್ ದಾಳಿ ಪ್ರಕರಣ ಮಾಸುವ ಮುನ್ನವೇ ಸಹೋದ್ಯೋಗಿಯಿಂದಲೇ ಮಹಿಳೆ ಮೇಲೆ ಆ್ಯಸಿಡ್ ದಾಳಿ ನಡೆದಿರುವ ಘಟನೆ ಕೆ.ಎಸ್.ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಆ್ಯಸಿಡ್ ದಾಳಿಗೆ ಒಳಗಾದ 34 ವರ್ಷದ ಮಹಿಳೆಯ ಬಲಗಣ್ಣಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಗರಬತ್ತಿ ಕಾರ್ಖಾನೆಯಲ್ಲಿ ವಿಚ್ಛೇಧಿತ ಮಹಿಳೆ ಹಾಗೂ ಗೋರಿಪಾಳ್ಯದ ನಿವಾಸಿ, ಆರೋಪಿ ಅಹಮ್ಮದ್ ಕೆಲಸ ಮಾಡುತ್ತಿದ್ದು, ಇವರಿಬ್ಬರ ನಡುವೆ ಸ್ನೇಹವಾಗಿ ಪ್ರೀತಿಯಾಗಿದೆ. ಮಹಿಳೆಗೆ ಮೂವರು ಮಕ್ಕಳಿದ್ದಾರೆ. ಆರೋಪಿ ಅಹಮ್ಮದ್‍ಗೂ ಮದುವೆಯಾಗಿದ್ದು ಕುಟುಂಬವಿದೆ.
ವಿಷಯ ಗೊತ್ತಿದ್ದರೂ ಅಹಮ್ಮದ್ ಆಕೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದನು.
ತನ್ನ ಮಕ್ಕಳು ದೊಡ್ಡವರಿದ್ದಾರೆ. ನಿನಗೂ ಮದುವೆಯಾಗಿ ಕುಟುಂಬವಿದೆ. ನಾವು ಮದುವೆಯಾಗುವುದು ಸರಿಯಲ್ಲ ಎಂದು ಆತನಿಗೆ ಮನವರಿಕೆ ಮಾಡಿದ್ದರೂ ವಿವಾಹವಾಗುವಂತೆ ದುಂಬಾಲು ಬಿದ್ದಿದ್ದನು. ನಿನ್ನೆ ಇದೇ ವಿಚಾರವಾಗಿ ಮಹಿಳೆಯೊಂದಿಗೆ ಆರೋಪಿ ಜಗಳವಾಡಿದ್ದಾನೆ. ಇಂದು ಬಾಟಲಿಯಲ್ಲಿ ಡೆಲ್ಯೂಟೆಡ್ ಆ್ಯಸಿಡ್‍ನ್ನು ತಂದಿದ್ದಾನೆ.
ಬೆಳಗ್ಗೆ 9.30ರ ಸುಮಾರಿನಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಾ ನಡೆದುಕೊಂಡು ಗಂಗಾನಗರದ ಸಾರಕ್ಕಿ ಸಿಗ್ನಲ್ ಸಮೀಪದ ಉಮಾಮಹೇಶ್ವರಿ ದೇವಸ್ಥಾನದ ಬಳಿ ಬರುತ್ತಿದ್ದಾಗ ಆರೋಪಿ ಅಹಮ್ಮದ್ ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದಾನೆ.
ಆಕೆ ನಿರಾಕರಿಸುತ್ತಿದ್ದಂತೆ ತನ್ನ ಬಳಿ ಇದ್ದ ಆ್ಯಸಿಡ್‍ನ್ನು ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ.
ತಕ್ಷಣ ಮಹಿಳೆ ಕೂಗಿಕೊಂಡಾಗ ದಾರಿಹೋಕರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯು ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಮಹಿಳೆ ಮೇಲೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದು, ಆತನನ್ನು ಶೀಘ್ರದಲ್ಲೇ ಬಂಧಿಸುವುದಾಗಿ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯ ಬಲಗಣ್ಣಿಗೆ ಗಾಯವಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಪ್ರಾಣಕ್ಕೆ ಅಪಾಯವಿಲ್ಲ. ಆರೋಪಿ ಹಾಕಿರುವ ಆ್ಯಸಿಡ್ ಡೆಲ್ಯೂಟೆಡ್.ಹೀಗಾಗಿ ಆತಂಕವಿಲ್ಲ.
ಮುಖದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಶೋಧ ಕಾರ್ಯ ನಡೆಯುತ್ತಿದೆ.
ಇತ್ತೀಚೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಫೈನಾನ್ಸ್ ಕಂಪನಿ ಮಹಿಳಾ ಉದ್ಯೋಗಿ ಮೇಲೆ ಆರೋಪಿ ನಾಗೇಶ್ ಆ್ಯಸಿಡ್ ದಾಳಿ ನಡೆಸಿದ್ದನು.
ಮತ್ತೊಂದು ಪ್ರಕರಣದಲ್ಲಿ ಕಬ್ಬನ್‍ಪೇಟೆ, 10ನೇ ಕ್ರಾಸ್‍ನಲ್ಲಿ ಬೆಳ್ಳಿ ಆಭರಣ ಪಾಲಿಶ್ ಮಾಡುವ ಸ್ನೇಹಿತನ ಮೇಲೆ ಕುಡಿದ ಮತ್ತಿನಲ್ಲಿ ಸಹೋದ್ಯೋಗಿ ಡೆಲ್ಯೂಟೆಡ್ ಆ್ಯಸಿಡ್ ದಾಳಿ ಮಾಡಿದ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಘಟನೆ ನಡೆದಿರುವುದು ಆತಂಕಕಾರಿಯಾಗಿದೆ.