
ಬೆಂಗಳೂರು: ನಗರದ ವೃದ್ಧ ಉದ್ಯಮಿಯೊಬ್ಬರು ಚಾಟಿಂಗ್ ಮೂಲಕ ‘ಲಲನೆ’ ಬೀಸಿದ ಮೋಹದ ಬಲೆಗೆ ಬಿದ್ದು, 14.90 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಯುವತಿ ಕಳುಹಿಸಿದ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಿದ್ದಲ್ಲದೆ ಆಕೆ ಕಳುಹಿಸಿದ್ದ ‘ಹಾಟ್’ ಫೋಟೋಗಳಿಗೆ ಉದ್ಯಮಿ ಪ್ರತಿಕ್ರಿಯಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಯುವತಿಯ ಸ್ನೇಹಿತ ಪೊಲೀಸರ ಸೋಗಿನಲ್ಲಿ ಉದ್ಯಮಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ.
ಈ ಕುರಿತು 73 ವರ್ಷದ ಉದ್ಯಮಿ ನೀಡಿರುವ ದೂರು ಆಧರಿಸಿ, ಇಬ್ಬರು ಅಪರಿಚಿತರು, ಕವನಾ, ನಿಧಿ ಎಂಬುವವರ ವಿರುದ್ಧ ಹಲಸೂರು ಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಷಿಪ್ರ ತನಿಖೆ ನಡೆಸಿ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ್ದ ಆರೋಪಿ ಯುವರಾಜ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆತನ ಸುಲಿಗೆ ಕೃತ್ಯಕ್ಕೆ ಕೈ ಜೋಡಿಸಿದವರ ಬಂಧನಕ್ಕೂ ಶೋಧ ಮುಂದುವರಿಸಿದ್ದಾರೆ.
ಆರೋಪಿ ಯುವರಾಜನೇ ಯುವತಿಯ ಹೆಸರಿನಲ್ಲಿ ಉದ್ಯಮಿಗೆ ಮೆಸೇಜ್ ಮಾಡಿರುವುದು, ಫೋಟೋ ಕಳುಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೂ, ಯುವತಿಯ ಪಾತ್ರದ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರ ಹೆಸರಲ್ಲಿ ರೈಡ್!ಹೊಸೂರು ರಸ್ತೆಯಲ್ಲಿ ಉದ್ಯಮಿ ಸ್ವಂತ ಕಂಪೆನಿ ಹೊಂದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇನ್ಶೂರೆನ್ಸ್ ವಿಚಾರಕ್ಕೆ ಕವನಾ ಎಂಬುವವರು ಪರಿಚಯ ಆಗಿದ್ದರು. ಒಂದು ವಾರದ ಹಿಂದೆ ಕವನಾ, ನಿಧಿ ಎಂಬಾಕೆಯನ್ನು ಪರಿಚಯ ಮಾಡಿಕೊಟ್ಟಿದ್ದರು. ಅವರ ಜತೆ ಉದ್ಯಮಿ ವಾಟ್ಸಾಪ್ ಚಾಟ್ ಮೂಲಕ ಸಂಪರ್ಕದಲ್ಲಿದ್ದರು.
ಆಗಸ್ಟ್ 3ರಂದು ನಿಧಿ ಮೊಬೈಲ್ ನಂಬರ್‌ನಿಂದ ಹೊಸೂರು ರಸ್ತೆಯ ಪೆಟ್ರೋಲ್ ಬಂಕ್ ಬಳಿ ಬರುವಂತೆ ಉದ್ಯಮಿಗೆ ಮೆಸೇಜ್ ಮಾಡಲಾಗಿತ್ತು. ಹೀಗಾಗಿ, ಉದ್ಯಮಿ ತಮ್ಮ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು.
ಉದ್ಯಮಿ ಅಲ್ಲಿಗೆ ತೆರಳಿದ ಕೆಲವೇ ನಿಮಿಷಗಳಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಅವರ ಕಾರಿನ ಕೀ, ಮೊಬೈಲ್ ಜಪ್ತಿ ಮಾಡಿಕೊಂಡು ಕಾರಿನಲ್ಲಿಯೇ ಕುಳಿತುಕೊಂಡಿದ್ದಾರೆ.
”ನಾವು ಕ್ರೈಂ ಪೊಲೀಸರು. ನಿಧಿ, ಕವನಾ ಅವರಿಗೆ ನೀವು ಕಳಿಸಿದ ಚಾಟ್, ವಿಡಿಯೋ ಸ್ಕ್ರೀನ್ ಶಾಟ್ ಸಂಬಂಧ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಕೇಸ್ ಮುಂದುವರಿಸದಿರಲು ಎಷ್ಟು ಹಣ ಕೊಡುತ್ತೀರಿ” ಎಂದು ಡಿಮ್ಯಾಂಡ್ ಮಾಡಿದ್ದಾರೆ.
ನಿಜವಾದ ಪೊಲೀಸರು ಎಂದು ನಂಬಿದ ಉದ್ಯಮಿ 50 ಸಾವಿರ ರೂ.ಕೊಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ದುಷ್ಕರ್ಮಿಗಳು, ಈ ಕೇಸ್‌ಗೆ ಇಷ್ಟು ಹಣ ಸಾಕಾಗುವುದಿಲ್ಲ ಎಂದು ಹೆದರಿಸಿದ್ದಾರೆ.
ಇದರಿಂದ ಕಂಗಾಲಾದ ಉದ್ಯಮಿ, ಕೂಡ್ಲುಗೇಟ್‌ನ ಬ್ಯಾಂಕ್‌ಗೆ ಹೋಗಿ 3.40ಲಕ್ಷ ರೂ. ಹಣ ಡ್ರಾ ಮಾಡಿಕೊಟ್ಟಿದ್ದಾರೆ. ಇದಾದ ಬಳಿಕ ಅವರೇ ಮನೆಗೆ ಕರೆದೊಯ್ದು ಪುನಃ 6 ಲಕ್ಷ ರೂ. ಪಡೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದಾದ ಕೆಲವೇ ದಿನಗಳಿಗೆ ಪುನಃ ಕರೆ ಮಾಡಿದ ದುಷ್ಕರ್ಮಿಗಳು, ಐದು ಲಕ್ಷ ರೂ. ನೀಡದಿದ್ದರೆ ನೀವು ಮಾಡಿರುವ ಚಾಟಿಂಗ್ ವಿಡಿಯೋ ನಿಮ್ಮ ಮನೆಯವರಿಗೆ ಕಳುಹಿಸಿ ಮರ್ಯಾದೆ ಕಳೆಯುತ್ತೇವೆ ಎಂದು ಹೆದರಿಸಿದ್ದಾರೆ. ಹೀಗಾಗಿ, ಉದ್ಯಮಿ ಪುನಃ 5 ಲಕ್ಷ ರೂ.ಗಳನ್ನು ತಮ್ಮ ಪರಿಚಯದ ವ್ಯಕ್ತಿ ಮೂಲಕ ತಲುಪಿಸಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಆಗಸ್ಟ್ 10ರಂದು ಕೆ.ಜಿ. ರಸ್ತೆಯ ಬನ್ನಪ್ಪ ಪಾರ್ಕ್ ಬಳಿ ಉದ್ಯಮಿಯನ್ನು ಕರೆಸಿಕೊಂಡು 50 ಸಾವಿರ ರೂ. ಪಡೆದಿದ್ದಾರೆ. ಹಣ ನೀಡಿದ ಬಳಿಕ ಉದ್ಯಮಿಗೆ ನಕಲಿ ಪೊಲೀಸರು ಇರಬಹುದು ಎಂಬ ಅನುಮಾನ ಬಂದಿದ್ದು, ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಅವಳಲ್ಲ ಅವನು!ಆರೋಪಿ ಯುವರಾಜ ಜಿಮ್ ಟ್ರೇನರ್ ಆಗಿದ್ದು, ಜಿಮ್ ಸಲಕರಣೆಗಳನ್ನು ಮಾರಾಟ ಮಾಡುತ್ತಾನೆ. ಇತ್ತೀಚೆಗೆ ಸಾಲದ ಸುಳಿಗೆ ಸಿಲುಕಿದ್ದ. ತನ್ನ ಸ್ನೇಹಿತೆ ನಿಧಿಗೆ ಉದ್ಯಮಿ ಮೆಸೇಜ್ ಮಾಡುವುದನ್ನು ಗಮನಿಸಿ ಮತ್ತೊಂದು ನಂಬರ್‌ನಿಂದ ಯುವತಿಯಂತೆಯೇ ಉದ್ಯಮಿಗೆ ಮೆಸೇಜ್ ಮಾಡಿದ್ದ.
ಬಳಿಕ ಹಣ ದೋಚುವ ಸಲುವಾಗಿ ಪೊಲೀಸರ ರೈಡ್ ನೆಪದ ನಾಟಕವಾಡಿ ಸುಲಿಗೆ ಮಾಡಿದ್ದಾನೆ. ಪ್ರಕರಣದ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.