ರಾಜ್ಯ

ಬೆಂಗಳೂರಲ್ಲಿ ರಾತ್ರಿ 1 ಗಂಟೆವರೆಗೆ ಹೋಟೆಲ್‌ ಕಾರ್ಯಚಟುವಟಿಕೆಗೆ ಅನುಮತಿ

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೋಟೆಲ್‌ಗಳ ಕಾರ್ಯಚಟುವಟಿಕೆಗೆ ತಡರಾತ್ರಿ ಒಂದು ಗಂಟೆಯವರೆಗೂ ಅವಕಾಶ ನೀಡಿ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌. ಪ್ರತಾಪ್‌ ರೆಡ್ಡಿ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರ ಕಮಿಷನರೇಟ್‌ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತಿಂಡಿ/ ತಿನಿಸು ಮಾರಾಟ ಮಾಡುವ ಸ್ಥಳಗಳ ವ್ಯಾಪಾರ ಅವಧಿಯನ್ನು ಮಧ್ಯರಾತ್ರಿ 1 ಗಂಟೆವರೆಗೂ ವಿಸ್ತರಿಸಲಾಗಿದೆ ಎಂದು ಆಯುಕ್ತರ ಆದೇಶದಲ್ಲಿ ತಿಳಿಸಲಾಗಿದೆ.

ಈ ಕುರಿತು ಅಧೀನ ಅಧಿಕಾರಿಗಳು, ಸಿಬ್ಬಂದಿಗೆ ನಿಯಮಾನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.ಸರಕಾರದ ಅಧಿಸೂಚನೆ 2016 ಜೂನ್‌ 25ರ ಅನ್ವಯ ಹೋಟೆಲ್‌ಗಳು ಮಧ್ಯರಾತ್ರಿ ಒಂದು ಗಂಟೆವರೆಗೂ ಕಾರ್ಯನಿರ್ವಹಿಸಲು ಅವಕಾಶವಿದ್ದರೂ ಪೊಲೀಸರು 11 ಗಂಟೆಗೆ ಕಾರ್ಯಚಟುವಟಿಕೆ ಸ್ಥಗಿತಗೊಳಿಸುತ್ತಿರುವ ಬಗ್ಗೆ ಬೃಹತ್‌ ಹೋಟೆಲ್‌ಗಳ ಸಂಘ ನೀಡಿದ ಮನವಿ ಮೇರೆಗೆ ಈ ಕ್ರಮ ವಹಿಸಲಾಗಿದೆ ಎಂದು ಆಯುಕ್ತರ ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.

ದಿನದ 24 ಗಂಟೆ ವಾಣಿಜ್ಯ ಚಟುವಟಿಕೆಗೆ ಇಲ್ಲ ಅವಕಾಶದಿನದ 24 ಗಂಟೆ ಹಾಗೂ ವಾರದ ಏಳು ದಿವಸವೂ ಅಂಗಡಿ ಮುಂಗಟ್ಟು, ಸೂಪರ್‌ ಮಾರ್ಕೆಟ್‌, ಹೋಟೆಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌ಗಳನ್ನು ತೆರೆಯಲು ಸರಕಾರ ಅನುಮತಿ ನೀಡಿ ಬಳಿಕ ಭದ್ರತೆ ದೃಷ್ಟಿಯಿಂದ ಇದನ್ನು ವಾಪಾಸು ಪಡೆಯಲಾಗಿತ್ತು.

ದೇಶದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಸ್ಟಾರ್ಟ್‌ ಅಪ್‌ಗಳ ರಾಜಧಾನಿಯಾಗಿರುವ ಬೆಂಗಳೂರು, ಏಷ್ಯಾ ಖಂಡದಲ್ಲೇ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ಪ್ರವಾಸೋದ್ಯಮ, ಆತಿಥ್ಯ ಹಾಗೂ ಹೆಲ್ತ್‌ ಟೂರಿಸಂ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ.

ಹಾಗಾಗಿ, ಸರಕಾರ ಬೆಂಗಳೂರು ಮಹಾನಗರವು ‘ಸೂರ್ಯ ಮುಳುಗದ ನಗರ’ಗಳ ಸಾಲಿಗೆ ಸೇರ್ಪಡೆ ಮಾಡಲು ನಿರ್ಧರಿಸಲಾಗಿತ್ತು. ಕೊರೊನಾದಿಂದ ಕುಸಿದಿರುವ ಆರ್ಥಿಕ ವ್ಯವಸ್ಥೆಗೆ ‘ಟಾನಿಕ್‌’ ನೀಡಿದಂತಾಗುತ್ತದೆ ಎಂದು ತಜ್ಞರು ಅಂದಾಜಿಸಿದ್ದರು.

ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರು ಹಾಗೂ ದೇಶ- ವಿದೇಶಗಳಿಂದ ಆಗಮಿಸುವವರಿಗೆ ತೀರಾ ಅನಾನುಕೂಲಗಳಾಗುತ್ತಿದ್ದವು. ಜತೆಗೆ, ಸ್ಥಳೀಯರಿಗೂ ರಾತ್ರಿ ವೇಳೆ ಊಟ ಮತ್ತು ವಸತಿ ಸೌಕರ್ಯ ಸಿಗದಂತಾಗಿತ್ತು.ಆದರೆ, ರಾತ್ರಿಯಿಡೀ ನಾಗರಿಕರು, ಮಹಿಳೆಯರ ರಕ್ಷಣೆ, ಸಾರಿಗೆ ಸಂಪರ್ಕ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಕಲ್ಪಿಸುವುದು ಸವಾಲಿನ ಸಂಗತಿಯಾಗಿತ್ತು.

ಹೀಗಾಗಿ ಕೊರೊನಾಘಾತದಿಂದ ವಾಣಿಜ್ಯ ಚಟುವಟಿಕೆಗಳು ತಳಕಚ್ಚಿದ್ದು, ಇವುಗಳಿಗೆ ಉತ್ತೇಜನ ನೀಡುವ ಸಲುವಾಗಿ 10 ಜನರಿಗಿಂತ ಹೆಚ್ಚು ಮಂದಿ ಕಾರ್ಯನಿರ್ವಹಿಸುವ ಹೋಟೆಲ್‌, ಶಾಪಿಂಗ್‌, ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಮುಂಗಟ್ಟುಗಳು ದಿನದ 24 ಗಂಟೆ ಕಾರ್ಯಾಚರಣೆ ನಡೆಸಲು ನೀಡಿದ ಅವಕಾಶ ತಡೆ ಹಿಡಿಯಲಾಯಿತು.

ದೇಶದಲ್ಲಿ ಮುಂಬೈ, ದೆಹಲಿ ಸೇರಿದಂತೆ ಹಲವು ಮಹಾನಗರಗಳಲ್ಲಿಈ ವ್ಯವಸ್ಥೆಯಿದ್ದು ಬೆಂಗಳೂರುಲ್ಲೂ ಈ ವ್ಯವಸ್ಥೆ ಜಾರಿಗೆ ಬೇಡಿಕೆ ಕೇಳಿ ಬಂದಿತ್ತು.ಆದರೆ, ರಾತ್ರಿಯಿಡೀ ನಾಗರಿಕರು, ಮಹಿಳೆಯರ ರಕ್ಷಣೆ, ಸಾರಿಗೆ ಸಂಪರ್ಕ ಸೇರಿದಂತೆ ಇತರೆ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿವುದು ಸವಾಲಾಗಿತ್ತು.

ಈ ಹಿನ್ನಲೆ ಆರಂಭಿಕ ಹಂತದಲ್ಲಿ ರಾತ್ರಿ ಒಂದು ಗಂಟೆವರೆಗೂ ಹೋಟೆಲ್‌ಗಳ ಕಾರ್ಯಚಟುವಟಿಕೆ, ತಿಂಡಿ ತಿನಿಸುಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button