Weather

ಬೆಂಗಳೂರಲ್ಲಿ ರಾತ್ರಿ ಮಳೆಗೆ ಇಬ್ಬರು ಬಲಿ, 24 ಬೈಕ್‍ಗಳು ಜಖಂ

Walls of a theatre collapsed due to heavy rains in Bengaluru crushing 24 bikes

ತಡರಾತ್ರಿ ರಾಜಧಾನಿಯಲ್ಲಿ ಸುರಿದ ರಣಮಳೆಗೆ ರಾಜಕಾಲುವೆಯಲ್ಲಿ ಸಿವಿಲ್ ಎಂಜಿನಿಯರ್ ಕೊಚ್ಚಿ ಹೋಗಿದ್ದು, ಮತ್ತೊಂದೆಡೆ ಮನೆಯ ಗೋಡೆ ಕುಸಿದು ವೃದ್ದೆಯೊಬ್ಬರು ಸಾವನ್ನಪ್ಪಿದ್ದಾರೆ. ಕೆ.ಆರ್.ಪುರದ ಗಾಯತ್ರಿ ಬಡಾವಣೆ ನಿವಾಸಿ, ಸಿವಿಲ್ ಎಂಜಿನಿಯರ್ ಮಿಥುನ್(24) ಕೊಚ್ಚಿ ಹೋಗಿದ್ದಾರೆ ಮತ್ತು ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿನಗರದ ಮುನಿಯಮ್ಮ(65) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮಳೆ ಅನಾಹುತದಿಂದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

24 ಬೈಕ್‍ಗಳು ಜಖಂ: ಭಾರೀ ಮಳೆಗೆ ಸಾಲು ಸಾಲು ಅವಾಂತ ರಗಳು ಸಂಭವಿಸಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಹಲವಾರು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ. ಥಿಯೇಟರ್‍ನ ಕಾಂಪೌಂಡ್ ಗೋಡೆ ಕುಸಿದು 24 ಬೈಕ್‍ಗಳು ಜಖಂಗೊಂಡಿವೆ. ಶಿವಮೊಗ್ಗ ಮೂಲದ ಮಿಥುನ್ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದು, ಸ್ನೇಹಿತರ ಜೊತೆ ವಾಸವಿದ್ದರು.

ರಾತ್ರಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ತಾವು ವಾಸವಿದ್ದ ಮನೆಯ ಕಟ್ಟಡದ ಕಾಂಪೌಂಡ್ ಕುಸಿದು ಬಿದ್ದಿದೆ. ಆ ವೇಳೆ ಬೈಕ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಮಿಥುನ್ ಬೈಕ್‍ನ್ನು ತೆಗೆದುಕೊಳ್ಳಲು ನೀರಿಗಿಳಿಯುತ್ತಿದ್ದಂತೆ ನೀರಿನ ರಭಸಕ್ಕೆ ನೋಡುನೋಡುತ್ತಿದ್ದಂತೆ ಕೊಚ್ಚಿಕೊಂಡು ಹೋಗಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಎಸ್‍ಡಿಆರ್‍ಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಎರಡು ತಂಡಗಳನ್ನಾಗಿ ರಚಿಸಿಕೊಂಡು ಮೊದಲಿಗೆ ರಾಜಕಾಲುವೆ ಮಾರ್ಗದಲ್ಲಿನ ಕಬ್ಬಿಣದ ಜಾಲರಿಗಳಲ್ಲಿ ಹುಡುಕಾಟ ನಡೆಸಿದರಾದರೂ ಪತ್ತೆಯಾಗಿಲ್ಲ. ಇದೀಗ ಸೀಗೆಹಳ್ಳಿ ಕೆರೆಯಲ್ಲಿ ಶೋಧ ನಡೆಸುತ್ತಿವೆ.

ಮತ್ತೊಂದೆಡೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾವೇರಿನಗರದಲ್ಲಿ ಮಳೆಗೆ ಮನೆಯ ಗೋಡೆ ಕುಸಿದು 65 ವರ್ಷದ ಮುನಿಯಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮುನಿಯಮ್ಮ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ.

ಮುನಿಯಮ್ಮ ಅವರ ಸೊಸೆ ಹಾಗೂ ಇವರ ಇಬ್ಬರು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರುಡಾಚಾರ್ ಪಾಳ್ಯ, ಗಾಯತ್ರಿ ಲೇಔಟ್, ಸಾಯಿಲೇಔಟ್, ಹೊರಮಾವು, ಗುರುಲೇಔಟ್ ಸೇರಿದಂತೆ ಇನ್ನಿತರ ಕಡೆ ಸುಮಾರು 400 ಮನೆಗಳಿಗೆ ನೀರು ನುಗ್ಗಿದೆ.

ಪಾಲಿಕೆ ಸಹಾಯಕ ಕಂದಾಯ ಅಕಾರಿಗಳು, ಇಂಜಿನಿಯರ್‍ಗಳ ತಂಡಗಳು ಸಮೀಕ್ಷಾ ಕಾರ್ಯ ನಡೆಸುತ್ತಿವೆ. ಅಲ್ಲದೆ ಬೇರೆ ಬೇರೆ ಸಮಸ್ಯೆಗಳಾಗಿರುವ ಕಡೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಹದೇವಪುರ ವಲಯ ವ್ಯಾಪ್ತಿಯ ಆಯುಕ್ತರಾದ ಡಾ.ತ್ರಿಲೋಕಚಂದ್ರ, ವಲಯ ಜಂಟಿ ಆಯುಕ್ತರಾದ ವೆಂಕಟಚಲಪತಿ ಹಾಗೂ ಇನ್ನಿತರೆ ಸಂಬಂಧಪಟ್ಟ ಅಕಾರಿಗಳು ರಾತ್ರಿಯಿಂದಲೇ ಸ್ಥಳದಲ್ಲಿದ್ದು, ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಯಲಹಂಕ ವಲಯ ವ್ಯಾಪ್ತಿಯಲ್ಲಿ ಮದರ್‍ಹುಡ್ ರಸ್ತೆ, ಸಹಕಾರ ನಗರ ರಸ್ತೆ, ಜಕ್ಕೂರು ರಸ್ತೆ, ನೇತಾಜಿನಗರ, ದೊಡ್ಡಬೊಮ್ಮಸಂದ್ರದ ಬಸವ ಸಮಿತಿ ರಸ್ತೆ, ವಿದ್ಯಾರಣ್ಯಪುರ, ಫಾತಿಮಾ ಲೇಔಟ್‍ನ ರಸ್ತೆಗಳಲ್ಲಿ ನೀರು ನಿಂತಿದ್ದು, ತೆರವುಗೊಳಿಸಲಾಗಿದೆ.

ಸಿಂಗಾಪುರ ಕೆರೆ ತುಂಬಿ ಕೋಡಿ ಹರಿದಿದೆ. ನೇತಾಜಿ ಹಾಗೂ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದು, ಸಹಾಯಕ ಕಂದಾಯ ಅಕಾರಿಗಳು ಹಾಗೂ ಇಂಜಿನಿಯರ್‍ಗಳ ತಂಡ ಸಮೀಕ್ಷಾ ಕಾರ್ಯ ನಡೆಸುತ್ತಿವೆ.

Antony Raju A

Ncibtimesmedia Web Portal Director & national executive officer Contact:9482289151 Gmail: antonyraju166@gmail.com

Related Articles

Leave a Reply

Your email address will not be published. Required fields are marked *

Back to top button