ಬೆಂಗಳೂರಲ್ಲಿ ರಣಮಳೆಗೆ ಕಾರ್ಮಿಕರಿಬ್ಬರು ಬಲಿ, ನದಿಯಂತಾದ ರಸ್ತೆಗಳು, ಮನೆಗಳಿಗೆ ನುಗ್ಗಿದ ನೀರು
Heavy rain in Bengaluru claims 2 lives,

ನಿನ್ನೆ ಸುರಿದ ರಕ್ಕಸ ಮಳೆಗೆ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಮಾತ್ರವಲ್ಲ, ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಹಲವಾರು ಮನೆಗಳು ಕುಸಿದು ಬಿದ್ದಿವೆ. ಉಲ್ಲಾಳು ಕೆರೆ ಸಮೀಪದ ಉಪಕಾರ್ ಲೇಔಟ್ ಬಸ್ ನಿಲ್ದಾಣದ ಸಮೀಪ ಕಾವೇರಿ 5ನೆ ಹಂತದ ನೀರು ಸರಬರಾಜು ಯೋಜನೆಗೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಭಾರತದ ಇಬ್ಬರು ಕೂಲಿ ಕಾರ್ಮಿಕರು ಪೈಪ್‍ನ ನೀರಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್‍ಕುಮಾರ್ ಮೃತಪಟ್ಟಿರುವ ದುರ್ದೈವಿಗಳು. ಕಾವೇರಿ 5ನೆ ಹಂತದ ನೀರು ಸರಬರಾಜಾಗುವ ಪೈಪ್‍ನಲ್ಲಿ ತುಂಬಿದ್ದ ನೀರಿನಲ್ಲಿ ಸಿಲುಕಿಕೊಂಡಿದ್ದ ತ್ರಿಲೋಕ್ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಿನ್ನೆ ಮಧ್ಯಾಹ್ನದಿಂದ ಇಂದು ಮುಂಜಾನೆವರೆಗೂ ಎಡಬಿಡದೆ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿಹೋಗಿದೆ.
ನಗರದ ರಸ್ತೆಗಳು ಕೆರೆಗಳಂತಾಗಿದ್ದು, ಹಲವಾರು ವಾಹನಗಳು ನೀರಿನಲ್ಲಿ ಮುಳುಗಿಹೋಗಿವೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ದ್ವಿಚಕ್ರ ವಾಹನ ಸವಾರರಂತೂ ಮುಂದೆ ಚಲಿಸಲಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಿನ್ನೆ ಸುರಿದ ಮಳೆಗೆ ಆರ್‍ಆರ್ ನಗರದ ಐಡಿಯಲ್ ಹೋಮ್ಸ್ ಬಡಾವಣೆ ಕೆರೆಯಾಗಿ ಪರಿವರ್ತನೆಯಾಗಿತ್ತು. ರಾಜಕಾಲುವೆಗೆ ಹೊಂದಿಕೊಂಡಂತೆ ಇರುವ ಐಡಿಯಲ್ ಹೋಮ್ಸ್ ಬಡಾವಣೆಯ ಬಹುತೇಕ ಅಪಾರ್ಟ್‍ಮೆಂಟ್‍ಗಳ ಬೇಸ್‍ಮೆಂಟ್‍ಗಳಿಗೆ ನೀರು ನುಗ್ಗಿತ್ತು. ಜತೆಗೆ ರಾಜಕಾಲುವೆಯ ಕೊಳಚೆ ನೀರು ರಸ್ತೆ ಮೇಲೆ ಹರಿದಿದ್ದರಿಂದ ಇಡೀ ಪ್ರದೇಶ ಕೊಳಚೆಮಯವಾಗಿ ಪರಿವರ್ತನೆಯಾಗಿತ್ತು.
ಸ್ಥಳೀಯರು ರಾತ್ರಿಯಿಡೀ ನೀರು ಹೊರಹಾಕುವ ಕಾರ್ಯದಲ್ಲಿ ನಿರತರಾಗಿರುವಂತಾಗಿತ್ತು. ದತ್ತಾತ್ರೇಯ ನಗರದಲ್ಲಿ ರಾಜಕಾಲುವೆಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ಜನ-ಜಾನುವಾರುಗಳ ಜೀವನ ಅಸ್ತವ್ಯಸ್ತವಾಗಿತ್ತು.ಕೆಆರ್ ಪುರಂನ ಲಿಂಗರಾಜಪುರದಲ್ಲಿರುವ ಕೆಎಸ್‍ಎಫ್‍ಸಿ ಬಡಾವಣೆಗೂ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ನೀರು ಹೊರಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.
ಇನ್ನು ಬಸವೇಶ್ವರನಗರದಲ್ಲಿರುವ ಅಭಿಮಾನಿ ಇನ್ ಅಂಡ್ ಕನ್ವೆನ್ಷನ್ ಸೆಂಟರ್ ಮುಂಭಾಗದ ರಸ್ತೆಯಲ್ಲಿ 18 ಅಡಿಗೂ ಹೆಚ್ಚು ನೀರು ನಿಂತಿದ್ದ ದೃಶ್ಯ ಕಂಡುಬಂತು. ಕನ್ವೆನ್ಷನ್ ಹಾಲ್‍ನ ಮೊದಲನೆ ಮಹಡಿವರೆಗೂ ನೀರು ನಿಂತಿದ್ದರಿಂದ ಹಾಲ್‍ನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ನೀರುಪಾಲಾದವು. ಸೆಂಟರ್ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿಹೋಗಿದ್ದವು.ಮಲ್ಲೇಶ್ವರಂನ 18ನೆ ಕ್ರಾಸ್‍ನಲ್ಲಿ ಬೃಹತ್ ಮರವೊಂದು ಬುಡಮೇಲಾದ ಪರಿಣಾಮ ಸದಾಶಿವನಗರ ಕಡೆಗೆ ತೆರಳುವ ರಸ್ತೆ ಬಂದ್ ಆಗಿತ್ತು. ಮುಂಜಾನೆವರೆಗೂ ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸದ ಹಿನ್ನೆಲೆಯಲ್ಲಿ ರಾತ್ರಿಯಿಡೀ ವಾಹನ ಸಂಚಾರಕ್ಕೆ ಭಾರೀ ಸಂಚಕಾರವಾಗಿತ್ತು. ನೀರಿನ ರಭಸಕ್ಕೆ ನಗರದ ಹಲವಾರು ರಸ್ತೆಗಳು ಬಿರುಕುಬಿಟ್ಟಿರುವ ದೃಶ್ಯಗಳು ಕಂಡುಬಂದವು.
ಪಾದರಾಯನಪುರದ ಬಳಿ ರಾಜಕಾಲುವೆಯಲ್ಲಿ ಹೂಳೆತ್ತಲು ನಿಲ್ಲಿಸಲಾಗಿದ್ದ ಬುಲ್ಡೋಜರ್ ಉರುಳಿ ಬಿದ್ದಿದೆ ಎಂದರೆ ರಕ್ಕಸ ಮಳೆಯ ರಭಸ ಹೇಗಿತ್ತು ಎಂಬುದಕ್ಕೆ ಉದಾಹರಣೆಯಂತಿತ್ತು. ಒಟ್ಟಾರೆ ನಿನ್ನೆ ಸುರಿದ ರಕ್ಕಸ ಮಳೆಗೆ ಇಡೀ ನಗರ ಬೆಚ್ಚಿಬಿದ್ದಿದ್ದು, ಸರ್ಕಾರ ಮತ್ತು ಬಿಬಿಎಂಪಿ ಅಕಾರಿಗಳು ಇಂದು ಮುಂಜಾನೆಯಿಂದಲೇ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿದ್ದಾರೆ.
ಅಗತ್ಯ ಮುಂಜಾಗ್ರತಾ ಕ್ರಮ:ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕಡಿಮೆ ಅಂತರದಲ್ಲಿ ಹೆಚ್ಚು ಪ್ರಮಾಣದ ಮಳೆಯಾಗಿದ್ದೇ ಇಡೀ ನಗರದಲ್ಲಿ ಅನಾಹುತ ಹೆಚ್ಚಾಗಲು ಕಾರಣ ಅಭಿಪ್ರಾಯಪಟ್ಟಿದ್ದಾರೆ.ಮಳೆಗಾಲಕ್ಕೂ ಮುನ್ನ ಈ ಪ್ರಮಾಣದ ಮಳೆ ನಗರದಲ್ಲಿ ಇದುವರೆಗೂ ಸುರಿದಿರಲಿಲ್ಲ. ಆದರೆ, ನಿನ್ನೆ ಕಡಿಮೆ ಅಂತರದಲ್ಲಿ ಭಾರೀ ಪ್ರಮಾಣದಲ್ಲಿ ಆದ ಮಳೆಯನ್ನು ನಗರ ತಡೆದುಕೊಳ್ಳಲು ಸಾಧ್ಯವಿಲ್ಲದಂತಾಗಿ ಇಂತಹ ಅನಾಹುತ ಸಂಭವಿಸಿದೆ ಎಂದು ತಿಳಿಸಿದರು.ನಿನ್ನೆ ರಾತ್ರಿಯಿಡೀ ನಿಯಂತ್ರಣ ಕೊಠಡಿಗಳಿಗೆ 450ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಘಟನೆ ನಡೆದಿದೆ. ರಾತ್ರಿಯಿಡೀ ನಮ್ಮ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಮತ್ತಿತರ ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಆಯುಕ್ತರು ವಿವರಿಸಿದರು.
ಜೂ.15ಕ್ಕೆ ಡೆಡ್‍ಲೈನ್:ನಗರದಲ್ಲಿ ಒಳಚರಂಡಿ ಮಂಡಳಿಯವರು ಹಲವಾರು ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದು ಅನಾಹುತ ಹೆಚ್ಚಳಕ್ಕೆ ಒಂದು ಕಾರಣವಾಗಿದೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಮುನ್ನ ಅಂದರೆ ಜೂ.15ರೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.ಇದರ ಜತೆಗೆ ಬಿಬಿಎಂಪಿಯ ಎಲ್ಲ ಮುಖ್ಯ ಅಭಿಯಂತರರುಗಳಿಗೆ ರಾಜಕಾಲುವೆಗಳನ್ನು ಸಂಪರ್ಕಿಸುವ ಮೋರಿಗಳು ಮತ್ತು ಚರಂಡಿಗಳನ್ನು ಶುಚಿಗೊಳಿಸುವ ಕಾಮಗಾರಿ ಕೈಗೆತ್ತಿಕೊಂಡು ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದರು.
ಆಯುಕ್ತರು ಭೇಟಿ ನೀಡಿದ ಪ್ರದೇಶದಲ್ಲೇ ಹೆಚ್ಚು ಹಾನಿ:ಗೌರವ್ ಗುಪ್ತ ಅವರ ವರ್ಗಾವಣೆಯಿಂದ ತೆರವಾಗಿದ್ದ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಕಳೆದ ವಾರವಷ್ಟೇ ಅಧಿಕಾರ ವಹಿಸಿಕೊಂಡಿರುವ ತುಷಾರ್ ಗಿರಿನಾಥ್ ಅವರು ಚಾರ್ಜ್ ವಹಿಸಿಕೊಂಡ ದಿನದಿಂದಲೂ ನಗರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.ಪರಿಶೀಲನೆ ಸಂದರ್ಭದಲ್ಲಿ ಮಳೆ ಅನಾಹುತ ತಡೆಗಟ್ಟುವ ಬಗ್ಗೆ ಅvಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ನಿನ್ನೆಯ ಮಳೆ ಸಂದರ್ಭದಲ್ಲಿ ಆಯುಕ್ತರು ಭೇಟಿ ನೀಡಿದ ಪ್ರದೇಶದಲ್ಲೇ ಅತಿ ಹೆಚ್ಚು ಅನಾಹುತ ಸಂಭವಿಸಿರುವುದು ಕಂಡುಬಂದಿದೆ.