ಬೀದಿ ಬದಿಯಲ್ಲಿಯೂ ಸಿಗಲಿದೆ ಉತ್ತಮ ಗುಣಮಟ್ಟದ ಆಹಾರ : ಬಿಬಿಎಂಪಿ ತಂದಿದೆ ಹೊಸ ಯೋಜನೆ

ಆನ್ ಲೈನ್ ಫುಡ್ ಡೆಲಿವರಿ ಪಡೆಯೋ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಲು ಬಿಬಿಎಂಪಿ ಮುಂದಾಗಿದೆ.
ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗೆ ಬಿಬಿಎಂಪಿ ಸಾಥ್ ನೀಡಲಿದೆ. ಇನ್ನು ಮುಂದೆ ಗ್ರಾಹಕರು ನಿರೀಕ್ಷೆ ಮಾಡಿರುವುದಕ್ಕಿಂತಲೂ ಕಡಿಮೆ ದರಕ್ಕೆ ಆಹಾರ ಸಿಗಲಿದೆ.
ಮಾತ್ರವಲ್ಲ ಗುಣಮಟ್ಟದ ಆಹಾರ ಕಡಿಮೆ ದರದಲ್ಲಿ ಕೈ ಸೇರಬೇಕು ಎಂದು ಬಯಸುವ ಗ್ರಾಹಕರಿಗೆ ಇದು ಶುಭ ಸುದ್ದಿಯಾಗಿರಲಿದೆ.
ಕಡಿಮೆ ದರದಲ್ಲಿ ಒಳ್ಳೆಯ ಆಹಾರ ಬೇಕು ಎನ್ನುವವರು ಬಿಬಿಎಂಪಿಯ ಈ ಯೋಜನೆಯಿಂದ ಸಂತೋಷಗೊಳ್ಳಲಿದ್ದಾರೆ.
ಹೌದು, ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳಿಂದಲೂ ಸ್ವಿಗ್ಗಿ, ಜೊಮ್ಯಾಟೋ ಮೂಲಕ ಆರ್ಡರ್ ಪಡೆಯಬಹುದು. ಈ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
ಈ ಯೋಜನೆಯ ಅನ್ವಯ 3,250 ರೂ. ನಂತೆ ಪ್ರತಿಯೊಬ್ಬರಿಗೆ ತರಬೇತಿ ನೀಡಲಾಗುವುದು. ಬಿಬಿಎಂಪಿಯ 8 ವಲಯದ ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ ಯೋಜನೆ ಹಮ್ಮಿಕೊಳ್ಳಲಾಗಿದೆ.
FSSAI ನುರಿತ ಬಾಣಸಿಗರಿಂದ ತರಬೇತಿ ನೀಡುವ ಯೋಜನೆ ಇದಾಗಿದೆ. ಈ ಯೋಜನೆ ಜಾರಿಗೆ ಬಂದರೆ ಬೀದಿ ಬದಿಯ ಆಹಾರ ಎಂದು ಯಾರು ಕೂಡಾ ಕೀಳಾಗಿ ಕಾಣುವ ಪ್ರಮೇಯವೇ ಬರುವುದಿಲ್ಲ.
ಯಾಕೆಂದರೆ ಬೀದಿ ವ್ಯಾಪಾರಿಗಳಿಗೂ ಕೂಡಾ ನುರಿತ ಬಾಣಸಿಗರಿಂದ ತರಬೇತಿ ನೀಡಲಾಗುತ್ತದೆ. ತರಬೇತಿ ಮಾತ್ರವಲ್ಲ, ತರಬೇತಿ ಪೂರೈಸಿರುವ ಬಗ್ಗೆ ಸರ್ಟಿಫಿಕೇಟ್ ನೀಡುವ ಯೋಜನೆ ಇದಾಗಿದೆ.
ಅಲ್ಲದೆ ಉದ್ಯಮಕ್ಕೆ ಸಾಲವನ್ನೂ ನೀಡಲಾಗುವುದು. ಸಾಲ ನೀಡಿದ ನಂತರ ವ್ಯಾಪಾರಕ ಆರಂಭಿಸಲು ನಿರ್ದಿಷ್ಟ ಜಾಗ ಗುರುತಿಸಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು.ಈ ಯೋಜನೆಯಡಿಯಲ್ಲಿ ಈಗಾಗಲೇ 2000 ವ್ಯಾಪಾರಿಗಳಿಗೆ ಬಿಬಿಎಂಪಿ ತರಬೇತಿ ನೀಡಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ವ್ಯಾಪಾರಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ.