
ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಶನಿವಾರ ಎಸ್ಯುವಿ ಕಾರೊಂದು ನಿಯಂತ್ರಣ ತಪ್ಪಿದ್ದರಿಂದ ರಸ್ತೆ ಬದಿಯ ಕಂದಕ್ಕೆ ಉರುಳಿ ಅದರಲ್ಲಿದ್ದ ಎಂಟು ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದರು. ದುರಂತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮೃತರ ಗುರುತು ಪತ್ತೆ ಹಚ್ಚಲು ಸ್ಥಳೀಯ ಆಡಳಿತ ಪ್ರಯತ್ನ ನಡೆಸುತ್ತಿದೆ.
ಪೂರ್ಣಿಯಾ ಜಿಲ್ಲೆಯ ತಾರಾಬದಿ ಪ್ರದೇಶದಲ್ಲಿ ಮದುವೆ ಸಮಾರಂಭದ ಮುನ್ನಾ ಕಾರ್ಯಕ್ರಮವಾದ ತಿಲಕ ಶಾಸ್ತ್ರವನ್ನು ಮುಗಿಸಿಕೊಂಡು ಕಿಶಾನ್ಗಂಜ್ ಜಿಲ್ಲೆಯ ನಾನಿಯಾ ಗ್ರಾಮಕ್ಕೆ ಸಂತ್ರಸ್ತರು ತೆರಳುತ್ತಿದ್ದ ವೇಳೆ ಶನಿವಾರ ನಸುಕಿನ ಜಾವ 3 ಗಂಟೆಗೆ ಈ ಅವಗಢ ಸಂಭವಿಸಿದೆ” ಎಂದು ಬೈಸಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕುಮಾರಿ ತೌಸಿ ಹೇಳಿದರು.
ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಂಜಿಲಾ ಮಾಧ್ಯಮಿಕ ಶಾಲೆಯ ಬಳಿಯ ಪೂರ್ಣಿಯಾ-ಕಿಶಾನ್ಗಂಜ್ ರಾಜ್ಯ ಹೆದ್ದಾರಿಯ ಪಕ್ಕದ ನೀರಿನಿಂದ ತುಂಬಿದ ಕಂದಕಕ್ಕೆ ವಾಹನ ಉರುಳಿದೆ” ಎಂದೂ ಅವರು ಹೇಳಿದರು. ಸ್ಥಳದಲ್ಲೇ ಎಂಟೂ ಜನರು ಅಸುನೀಗಿದ್ದಾರೆ. ಅವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.