ರಾಜ್ಯ

ಬಿಲ್ಕಿಸ್ ಬಾನೊ ಪ್ರಕರಣ: ಗುಜರಾತ್‌ಗೆ ಸುಪ್ರೀಂಕೋರ್ಟ್ ತರಾಟೆ

ಹೊಸದಿಲ್ಲಿ: ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ 11 ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಗುಜರಾತ್ ಸರಕಾರ ನೀಡಿರುವ ಪ್ರತಿಕ್ರಿಯೆಯು ಬೃಹತ್ ಪ್ರಮಾಣದ್ದಾಗಿದ್ದು, ಅದರಲ್ಲಿ ಸರಣಿ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ.

ಆದರೆ ವಾಸ್ತವಿಕ ಅಂಶಗಳೇ ನಾಪತ್ತೆಯಾಗಿವೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.ಬಿಲ್ಕಿಸ್‌ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್‌ ಸರಕಾರವು ನೀಡಿದ ವಿವರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ‘ನಿಮಗಿರುವ ಬುದ್ಧಿ ಉಪಯೋಗಿಸಲಿಲ್ಲವೇ?’ ಎಂದು ಖಾರವಾಗಿ ಪ್ರಶ್ನಿಸಿದೆ.‘ಪ್ರತಿವಾದಿಯ ಅಫಿಡವಿಟ್‌ನಲ್ಲಿಇಷ್ಟೊಂದು ಸರಣಿ ತೀರ್ಪುಗಳನ್ನು ಉಲ್ಲೇಖಿಸಲಾಗಿರುವುದನ್ನು ಹಿಂದೆ ಕಂಡಿರಲಿಲ್ಲ.

ಯಾಕೆ ಬಿಡುಗಡೆ ಮಾಡಿದಿರಿ ಎಂದು ವಾಸ್ತವಾಂಶ ಭರಿತ ಕಾರಣ ನೀಡಿದ್ದರೆ ಸಾಕಿತ್ತು. ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವ ಅವಸರದಲ್ಲಿ ದೊಡ್ಡ ವಿಶ್ಲೇಷಣೆಯನ್ನೇ ನೀಡಲಾಗಿದೆ. ನಮಗೆ ಪಾಠ ಮಾಡುವ ಮಾದರಿಯಲ್ಲಿ ವಿವರಣೆಗಳಿವೆ,’’ ಎಂದು ನ್ಯಾ. ಸಿ.ಟಿ. ರವಿಕುಮಾರ್ ಅವರು ಮಂಗಳವಾರ ಗುಜರಾತ್‌ ಸರಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ.

ಗುಜರಾತ್ ಸರಕಾರದ ಪ್ರತಿಕ್ರಿಯೆಯನ್ನು ತಾವು ಪರಿಶೀಲಿಸುವ ಮುನ್ನವೇ ಅದನ್ನು ಸುದ್ದಿಪತ್ರಿಕೆಗಳಲ್ಲಿ ತಾವು ನೋಡುವಂತಾಗಿತ್ತು ಎಂದು ನ್ಯಾ. ಅಜಯ್ ರಸ್ತೋಗಿ ಹೇಳಿದ್ದಾರೆ.ಬಳಿಕ ಸರಕಾರದ ಅಫಿಡವಿಟ್‌ಅನ್ನು ಪ್ರಕರಣದ ಎಲ್ಲ ಅರ್ಜಿದಾರರಿಗೆ ಲಭ್ಯವಾಗಿಸಲು ಸುಪ್ರೀಂಕೋರ್ಟ್‌ ಸೂಚಿಸಿತು.

ಪ್ರಕರಣದ ವಿಚಾರಣೆಯನ್ನು ನ. 29ಕ್ಕೆ ಮುಂದೂಡಿತು.14 ವರ್ಷಕ್ಕೂ ಹೆಚ್ಚು ಅವಧಿಗೆ ಜೈಲು ವಾಸ ಅನುಭವಿಸಿದ್ದಾರೆ. ಜತೆಗೆ ಸನ್ನಡತೆ ತೋರಿದ್ದಾರೆ ಎಂಬ ಕಾರಣ ನೀಡಿ ಬಾನೊ ಅತ್ಯಾಚಾರಿಗಳನ್ನು ಆಗಸ್ಟ್‌ 15ರಂದು ಬಿಡುಗಡೆಗೊಳಿಸಲಾಗಿತ್ತು.

ಗುಜರಾತ್‌ ಸರಕಾರದ ಶಿಫಾರಸಿನ ಮೇಲೆ ಕೇಂದ್ರ ಗೃಹ ಸಚಿವಾಲಯವು ಬಿಡುಗಡೆಗೆ ಒಪ್ಪಿಗೆ ನೀಡಿತ್ತು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಪಿಎಂ ನಾಯಕಿ ಸುಭಾಷಿಣಿ ಅಲಿ ಮತ್ತು ಇತರ ಇಬ್ಬರು ಮಹಿಳೆಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಬಿಜೆಪಿಯ ಅಲ್ಪೇಶ್ ಠಾಕೂರ್‌ ಕೂಡ ಇದನ್ನು ಪ್ರಶ್ನಿಸಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button