ಬಿಬಿಎಂಪಿ ಮಾರ್ಗಸೂಚಿ ಪಾಲಿಸಲು ನಾವು ಸಿದ್ಧ : ಬಾರ್ ಮಾಲೀಕರು

ಕೊರೊನಾ ತಡೆಗಟ್ಟಲು ಬಿಬಿಎಂಪಿ ಸೂಚಿಸುವ ಪಾಲನೆ ಮಾಡಲು ನಾವು ಸಿದ್ದರಿದ್ದೇವೆ ಎಂದು ಬಾರ್ ಮಾಲೀಕರು ಘೋಷಿಸಿದ್ದಾರೆ. ಕೊರೊನಾ ತಡೆಗಟ್ಟುವ ಕುರಿತಂತೆ ನಿನ್ನೆ ಪಾಲಿಕೆಯಿಂದ ಸಭೆ ನಡೆಸಿ ಕೆಲವು ಕಟ್ಟುನಿಟ್ಟಿನ ಸೂಚನೆ ಪಾಲಿಸುವಂತೆ ಸಲಹೆ ನೀಡಿದ್ದಾರೆ.
ಅವರು ನೀಡಿರುವ ಸೂಚನೆ ಪಾಲಿಸಲು ನಾವು ಸಿದ್ಧರಿದ್ದೇವೆ ಎಂದು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಶ್ರೀಕಾಂತ್ ನಾಯ್ಡು ತಿಳಿಸಿದ್ದಾರೆ.ಆದರೆ, ಈಗಾಗಲೇ ನಾವು ಹೊಸ ವರ್ಷ ಆಚರಣೆಗೆ ಸಿದ್ದ ಮಾಡಿಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಕಠಿಣ ನಿಯಮಗಳನ್ನು ವಿಧಿಸುವುದು ಬೇಡ ಎಂದು ನಾಯ್ಡು ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ನಿಯಮ ಪಾಲಿಸುವಂತೆ ನಾವು ನಮ್ಮ ಗ್ರಾಹಕರು ಹಾಗೂ ಕೆಲಸಗಾರರಿಗೆ ಸೂಚನೆ ನೀಡಿದ್ದೇವೆ.
ಸದ್ಯ ಹೊಟೇಲ್ ಬುಕ್ಕಿಂಗ್ ಆಶಾದಾಯಕವಾಗಿತ್ತು. ಈಗ ಜನರು ಬುಕ್ಕಿಂಗ್ ವಾಪಸ್ ಪಡೆಯುವ ಸಾಧ್ಯತೆ ಇದೆ, ಹೀಗಾಗಿ ಸರ್ಕಾರ ಸಮಯ ನಿಗದಿ ಮಾಡದೆ ಇದ್ರೆ ಅನುಕೂಲವಾಗಲಿದೆ ಎಂದರು.ಕಳೆದ ಹಲವು ವರ್ಷಗಳಿಂದ ನಾವು ಆದಾಯವಿಲ್ಲದೆ ಸೊರಗಿದ್ದೇವೆ. ಈಗ ವ್ಯಾಪಾರವಾಗುವ ಸಾಧ್ಯತೆ ಇರುವುದರಿಂದ ಹೊಸ ವರ್ಷ ಮುಗಿಯುವವರೆಗೆ ಬಿಬಿಎಂಪಿಯವರು ಸಹಕರಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಹೊಟೇಲ್ ಗಳಲ್ಲಿ ಗೈಡ್ ಲೈನ್ ಪ್ರದರ್ಶನಕ್ಕೆ ಸೂಚಿಸಿದ್ದಾರೆ. ಹೊಸ ವರ್ಷ, ಕ್ರಿಸ್ ಮಸ್ ಆಚರಣೆಯಲ್ಲೂ ನಿಯಮ ಇದೆ. ಮಾಸ್ಕ್ , ಸಾಮಾಜಿಕ ಅಂತರ ಕಾಪಾಡಲು ಸಲಹೆ ನೀಡಿದ್ದಾರೆ ಅದನ್ನು ಪಾಲಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸದಸ್ಯ ಗೋಪಾಲ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಿಂದೆ ರೂಲ್ಸ ಬಂದಾಗ ನಮಗೆ ತೊಂದರೆಯಾಗಿತ್ತು. ಈಗ ಮತ್ತೆ ಕೋವಿಡ್ ಬಂದ್ರೆ ಅದರ ಹೊಡೆತ ಬೀಳುತ್ತೆ. ಬೇರೆ ದೇಶಗಳಿಂದ ಬರುವವರಿಗೆ ತಪಾಸಣೆ ನಡೆಸುವ ಮೂಲಕ ಕೊರೊನಾ ಹರಡದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.