
ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರಣ ಮುಂದಿಟ್ಟುಕೊಂಡು ಕುಂಟು ನೆಪ ಹೇಳದೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನವಾಗಿದೆ.ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರ ಸದ್ಯದಲ್ಲೇ ಮೇಲ್ಮನವಿ ಅರ್ಜಿ ಹಾಕಲು ಚಿಂತನೆ ನಡೆಸಿದೆ.ನಾಳೆ ಅಥವಾ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾನೂನು ತಜ್ಞರ ಸಲಹೆ ಪಡೆದು ಬಿಬಿಎಂಪಿ ವಾರ್ಡ್ಗಳ ಪುನರ್ ವಿಂಗಡಣೆ, ಮೀಸಲಾತಿ ಹಾಗೂ ಮತದಾರರ ಪಟ್ಟಿ ಅಂತಿಮಗೊಳ್ಳಲು ಸಮಯ ಅವಕಾಶ ಬೇಕಾಗಿರುವುದರಿಂದ ಆದೇಶವನ್ನು ಪುನರ್ಪರಿಶೀಲನೆ ಮಾಡಲು ಸರ್ಕಾರ ಮೇಲ್ಮನವಿ ಹಾಕಲಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ನಡೆಸಲು ನಾವು ಸಿದ್ದರಾಗಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದರಾದರೂ ಪ್ರಸ್ತುತ ಸರ್ಕಾರದ ಮೇಲೆ ಕೇಳಿಬಂದಿರುವ ಕೆಲವು ಗಂಭೀರ ಆರೋಪಗಳಿಂದ ಹಿನ್ನಡೆಯಾಗಬಹುದೆಂಬ ಆತಂಕ ಕೂಡ ಕಾಡುತ್ತಿದೆ.
ಸರ್ಕಾರದ ಮೇಲೆ ಕೇಳಿಬಂದಿರುವ 40% ಕಮಿಷನ್ ಆರೋಪ, ಪಿಎಸ್ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿಯಲ್ಲಿ ನಡೆದಿರುವ ಅಕ್ರಮ, ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆ, ಮೂಲಭೂತ ಸೌಕರ್ಯಗಳ ಕೊರತೆ, ಸಂಚಾರ ದಟ್ಟಣೆ ಹೀಗೆ ಹತ್ತು ಹಲವು ಸಮಸ್ಯೆಗಳಿರುವುದರಿಂದ ಪ್ರಸ್ತುತ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ.
ಚುನಾವಣೆ ನಡೆಸಲು ನಾವು ಹಿಂದೇಟು ಹಾಕುತ್ತಿಲ್ಲ. ಆದರೆ ಬಿಬಿಎಂಪಿಯ ವಾರ್ಡ್ ಪುನರ್ ವಿಂಗಡಣೆ, ಮೀಸಲಾತಿ ಮತ್ತು ಮತದಾರರ ಪಟ್ಟಿ ಅಂತಿಮಗೊಳ್ಳಲು ಕನಿಷ್ಠಪಕ್ಷ 2ರಿಂದ 3 ತಿಂಗಳು ಸಮಯಾವಕಾಶ ಬೇಕಾಗುತ್ತದೆ. 250 ವಾರ್ಡ್ಗಳಿಗೂ ಚುನಾವಣೆ ನಡೆಸಬೇಕಾಗಿರುವುದರಿಂದ ಸಮಯ ಅವಕಾಶ ಕೊಡಬೇಕೆಂದು ಸರ್ಕಾರ ನ್ಯಾಯಲಯಕ್ಕೆ ಮನವಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.ಎರಡು ವಾರದೊಳಗೆ ಚುನಾವಣಾ ಪ್ರಕ್ರಿಯೆಗೆ ಅಸೂಚನೆ ಹೊರಡಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಒಂದು ವೇಳೆ ಮತದಾರರ ಪಟ್ಟಿ ಮತ್ತು ವಾರ್ಡ್ ವಿಂಗಡಣೆಯಲ್ಲಿ ವ್ಯತ್ಯಾಸವಾದಾಗ ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಜ್ಞೆ ತಂದರೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈ ಎಲ್ಲಾ ಸಾಧಕಬಾಧಕಗಳ ಬಗ್ಗೆ ಅಧ್ಯಯನ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಅಥವಾ ಶುಕ್ರವಾರ ಅಡ್ವೋಕೇಟ್ ಜನರಲ್, ಕಾನೂನು ತಜ್ಞರ ಸಲಹೆ ಪಡೆದು ಮೇಲ್ಮನವಿಯನ್ನು ಸಲ್ಲಿಸಲು ಸೂಚನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಇದರ ಜೊತೆಗೆ ಸುಪ್ರೀಂಕೋರ್ಟ್ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ವಿಚಾರಣಾ ಹಂತದಲ್ಲಿದೆ. ಈ ಅರ್ಜಿ ಇತ್ಯರ್ಥವಾಗುವವರೆಗೂ ಆಯೋಗ ಅಸೂಚನೆ ಹೊರಡಿಸುವಂತಿಲ್ಲ. ಇದು ಕೂಡ ಸರ್ಕಾರಕ್ಕೆ ವರದಾನವಾಗಿ ಪರಿಣಮಿಸಿದೆ.ಇನ್ನು ಆಡಳಿತಾರೂಢ ಬಿಜೆಪಿಯಲ್ಲೇ ಚುನಾವಣೆ ನಡೆಸುವ ಬಗ್ಗೆ ಪರ ವಿರೋಧ ವ್ಯಕ್ತವಾಗಿದೆ. ಮೊದಲಿನಿಂದಲೂ ಬೆಂಗಳೂರಿನ ಮೇಲೆ ಹಿಡಿತ ಸಾಸಲು ಇಲ್ಲಿನ ಪ್ರಭಾವಿಗಳು ಪ್ರಯತ್ನ ನಡೆಸಿದ್ದು, ಗುಟ್ಟಾಗಿ ಉಳಿದಿಲ್ಲ.ಕೆಲವು ಸಚಿವರು ಮತ್ತು ಶಾಸಕರು ಈಗ ಚುನಾವಣೆ ನಡೆದರೆ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡರೆ 2023 ವಿಧಾನಸಭೆ ಚುನಾವಣೆಯಲ್ಲಿ ತಮಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಈಗ ಚುನಾವಣೆ ನಡೆಸುವುದು ಸೂಕ್ತವಲ್ಲ. ಸರ್ಕಾರದ ಮೇಲೆ ಆರೋಪಗಳಿವೆ. ಅಲ್ಲದೆ ಮುಂದಿನ ವಿಧಾನಸಭೆ ಚುನಾವಣೆಗೆ ಯಾರಿಗೆ ಟಿಕೆಟ್ ಸಿಗುತ್ತದೆಯೋ ಇನ್ಯಾರಿಗೆ ಕೈ ತಪ್ಪುತ್ತದೆಯೋ ಗೊತ್ತಿಲ್ಲ.ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಚುನಾವಣೆ ನಡೆಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದಕ್ಕೆ ಸೊಪ್ಪು ಹಾಕದೆ ವಾರ್ಡ್ ಪುನರ್ ವಿಂಗಡಣೆ, ಹೊಸದಾಗಿ ಬಿಬಿಎಂಪಿಗೆ ಗ್ರಾಮಗಳ ಸೇರ್ಪಡೆ, ಮತದಾರರ ಪಟ್ಟಿ ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಚುನಾವಣೆ ನಡೆಸಬೇಕೆಂಬ ಅಭಿಪ್ರಾಯವು ಪಕ್ಷದ ವಲಯದಲ್ಲಿ ವ್ಯಕ್ತವಾಗಿದೆ.ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ತಜ್ಞರ ಜೊತೆ ಚರ್ಚಿಸಿದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಬಿಬಿಎಂಪಿಯ 198 ವಾರ್ಡ್ಗಳನ್ನು 250ಕ್ಕೆ ಹೆಚ್ಚಳ ಮಾಡುವ ಕರ್ನಾಟಕ ನಗರಪಾಲಿಕೆಗಳ ತಿದ್ದುಪಡಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ಮಾಡಲಾಗಿತ್ತು. ಸರ್ಕಾರದ ಈ ಮಸೂದೆಗೆ ರಾಜ್ಯಪಾಲರ ಅಂಗೀಕಾರವು ದೊರೆತಿತ್ತು.