ರಾಜ್ಯ

ಬಿಬಿಎಂಪಿಯ ಹಣ ಪ್ರೇಯಸಿಯ ಖಾತೆಗೆ ವರ್ಗಾವಣೆ: ತನಿಖೆ ಚುರುಕುಗೊಳಿಸಿದ ಪೊಲೀಸರು

ಯಲಹಂಕ ವಲಯ ಬ್ಯಾಟರಾಯನಪುರ ಬಿಬಿಎಂಪಿ ಕಚೇರಿಯ ಹಣ ದುರುಪಯೋಗ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಅಮೃತಹಳ್ಳಿ ಪೊಲೀಸರು, ಆರೋಪಿಗಳಾದ ಎಂ.ಕೆ. ಪ್ರಕಾಶ್‌ ಹಾಗೂ ಕಾಂಚನಾ ನಡೆಸಿರುವ ಅಕ್ರಮದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಾಲಿಕೆಯ ಎಸ್‌ಡಿಎ ಆಗಿದ್ದ ಆರೋಪಿ ಪ್ರಕಾಶ್‌ ಪಾಲಿಕೆಯ 14.07 ಲಕ್ಷ ರೂ.ಗಳನ್ನು ಪ್ರೇಯಸಿ ಕಾಂಚನಾ ಅಕೌಂಟ್‌ಗೆ ವರ್ಗಾಯಿಸಿ ಅಕ್ರಮ ಎಸಗಿದ್ದ. ಒಂದೂವರೆ ವರ್ಷದಿಂದ ಪ್ರಿಯಕರ ಪ್ರಕಾಶ್‌ ಕಳಿಸಿಕೊಟ್ಟಿದ್ದ ಹಣದಲ್ಲಿ ಕಾಂಚನಾ ಚಿನ್ನಾಭರಣ ಖರೀದಿ ಮಾಡಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ವಿಚಾರ ಗೊತ್ತಾಗಿದೆ.

ಹೀಗಾಗಿ ಕಾಂಚನಾ ಅಕ್ರಮದ ಹಣದಲ್ಲಿ ಖರೀದಿ ಮಾಡಿರುವ ಆಭರಣ ಮತ್ತಿತರೆ ವಸ್ತುಗಳ ಜಪ್ತಿಗೆ ಕ್ರಮ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಬ್ಯಾಟರಾಯನಪುರ ವಾರ್ಡ್‌ನ ಕೆಲಸಗಳಿಗೆ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಬೇಕಿದ್ದ ಪ್ರಕಾಶ್‌, ಅದನ್ನು ಬ್ಯೂಟಿಶಿಯನ್‌, ಪ್ರೇಯಸಿ ಕಾಂಚನಾ ಅಕೌಂಟ್‌ಗೆ ಕಳುಹಿಸಿಕೊಟ್ಟಿದ್ದ.

ಲೆಕ್ಕಪತ್ರಗಳಲ್ಲಿ ಮಾತ್ರ ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಜುಲೈ 4ರಂದು ಲೆಕ್ಕಪರಿಶೋಧನೆ ಮಾಡಿದಾಗ ಪ್ರಕಾಶ್‌ 14.7 ಲಕ್ಷ ರೂ. ದುರುಪಯೋಗ ಮಾಡಿಕೊಂಡಿರುವುದು ಬಯಲಾಗಿತ್ತು.

ಈ ಕುರಿತು ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌ ರಾಜೇಂದ್ರ ನಾಯಕ್‌ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಗಳಾದ ಪ್ರಕಾಶ್‌ ಹಾಗೂ ಕಾಂಚನಾ ಅವರನ್ನು ಬಂಧಿಸಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button