
ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಬಿಟ್ ಕಾಯಿನ್ ಹಗರಣದ ತನಿಖೆ ಚುರುಕುಗೊಂಡಿದ್ದರೆ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿಗಳು ಸಿಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಗಳು ಕೇಳಿ ಬಂದ ನಂತರ ಯಾವುದೇ ತನಿಖೆ ನಡೆಯುತ್ತಿಲ್ಲ. ಈ ಬಗ್ಗೆ ಪಾರದರ್ಶಕ ತನಿಖೆ ಕೈಗೊಂಡರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಹೇಳಿದರು.ಪಿಎಸ್ಐ ಪರೀಕ್ಷೆ ಹಗರಣದ ತನಿಖೆ ಕೇವಲ ಕಲಬುರಗಿ ಮಾತ್ರ ಸಿಮೀತವಾಗಬಾರದು. ಸರ್ಕಾರ ತನಿಖೆ ನಡೆಸದೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಒಂದೇ ಪರೀಕ್ಷಾ ಕೇಂದ್ರದ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ. ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಹಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ತನಿಖೆ ಮಾತ್ರ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮರು ಪರೀಕ್ಷೆ ಮಾಡಬೇಕೆಂದಿರುವ ಸರ್ಕಾರ ೫೪೫ ಮಂದಿ ವೈಎಂಆರ್ ಶೀಟ್ ತರಿಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿರುವ ಖರ್ಗೆ, ಇಲ್ಲಿ ಸರ್ಕಾರದ ದಡ್ಡತನ ಎದ್ದು ಕಂಡಿದೆ ಎಂದು ಅವರು ದೂರಿದರು.
೩೦೦ ಮಂದಿ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಸರ್ಕಾರವೇ ಹೇಳುತ್ತಿವೆ. ಆದರೆ ಸರ್ಕಾರ ಇಲ್ಲಿಯವರೆಗೆ ಹಗರಣಕ್ಕೆ ಸಂಬಂಧಿಸಿದಂತೆ ಎಷ್ಟೋ ಜನರನ್ನು ಬಂಧಿಸಿದೆ. ಒಂದಿಬ್ಬರು ಪ್ರಮುಖ ಆರೋಪಿಗಳು ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.