ರಾಜಕೀಯ

ಬಿಜೆಪಿ ಸೇರ್ಪಡೆಯಾಗದಕ್ಕೆ ಬಿಸಿಸಿಐ ಹುದ್ದೆಯಿಂದ ಗಂಗೂಲಿಗೆ ಗೇಟ್‌ಪಾಸ್: ಟಿಎಂಸಿ ಆರೋಪ

ಕೋಲ್ಕತಾ: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವುದು ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದೆ. ಎರಡನೇ ಅವಧಿಗೆ ಗಂಗೂಲಿ ಅವರು ಮುಂದುವರಿಯದೆ ಇರುವುದರ ವಿಚಾರವಾಗಿ, ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಹರಿಹಾಯ್ದಿದೆ.

ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಉದ್ದೇಶ ಕೈಗೂಡದ ಕಾರಣ ಅವರನ್ನು ಹೀನಾಯವಾಗಿ ನಡೆಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿದೆ ಎಂದು ಟಿಎಂಸಿ ಆರೋಪಿಸಿದೆ.ಬಂಗಾಳದಲ್ಲಿ ಬಹಳ ಜನಪ್ರಿಯತೆ ಹೊಂದಿರುವ ಸೌರವ್ ಗಂಗೂಲಿ ಅವರು ಕೇಸರಿ ಪಕ್ಷವನ್ನು ಸೇರಿಕೊಳ್ಳುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡುವಂತೆ ಕಳೆದ ವರ್ಷದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವದಂತಿ ಹರಡಿಸಿತ್ತು.

ಈ ಮೂಲಕ ಅದರ ಲಾಭ ಪಡೆದುಕೊಳ್ಳಲು ನೋಡಿತ್ತು ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಟೀಕಿಸಿದ್ದಾರೆ.ಬಿಸಿಸಿಐ ಕಾರ್ಯದರ್ಶಿಯಾಗಿ ಗೃಹ ಸಚಿವ ಅಮಿತ್ ಶಾ ಅವರ ಮಗ ಜಯ್ ಶಾ ಮುಂದುವರಿದಿದ್ದಾರೆ. ಆದರೆ ಗಂಗೂಲಿ ಅವರು ಅಧ್ಯಕ್ಷರಾಗಿ ಎರಡನೇ ಅವಧಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ.

ಇದು ರಾಜಕೀಯ ಸಂಚಿನ ಉದಾಹರಣೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.ಈ ಆರೋಪ ನಿರಾಧಾರ ಎಂದು ಬಿಜೆಪಿ ಹೇಳಿದೆ. ‘ಕೋಲ್ಕತಾದ ರಾಜಕುಮಾರ’ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಎಂದಿಗೂ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ.”ಸೌರವ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂಬ ಸಂದೇಶವನ್ನು ಬಂಗಾಳದ ಜನತೆಯ ನಡುವೆ ಹರಡಲು ಬಿಜೆಪಿ ಬಯಸಿದೆ.

ನಾವು ಈ ವಿಚಾರದ ಬಗ್ಗೆ ನೇರವಾಗಿ ಹೇಳಿಕೆ ನೀಡುತ್ತಿಲ್ಲ. ಆದರೆ ಚುನಾವಣೆಗೂ ಮುನ್ನ ಮತ್ತು ನಂತರ ಬಿಜೆಪಿ ಅಂತಹ ತಂತ್ರವನ್ನು ಹರಿಬಿಟ್ಟಿತ್ತು. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಎರಡನೇ ಅವಧಿಗೆ ಮುಂದುವರಿಯಲು ಗಂಗೂಲಿ ಅವರಿಗೆ ಅವಕಾಶ ನೀಡದೆ ಇರುವುದರ ಕುರಿತಾದ ಅಂತಹ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡುವುದು ಬಿಜೆಪಿ ಜವಾಬ್ದಾರಿ.

ಸೌರವ್ ಅವರನ್ನು ಅಪಮಾನಿಸಲು ಬಿಜೆಪಿ ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತಿದೆ” ಎಂದು ಘೋಷ್ ಆರೋಪಿಸಿದ್ದಾರೆ.ಬಿಜೆಪಿಯ ಹಿರಿಯ ನಾಯಕರೊಬ್ಬರು ಈ ವರ್ಷದ ಮೇ ತಿಂಗಳಲ್ಲಿ ಸೌರವ್ ಗಂಗೂಲಿ ಅವರ ಮನೆಗೆ ಊಟಕ್ಕೆ ತೆರಳಿದ್ದರು” ಎಂದು ಅಮಿತ್ ಶಾ ಅವರ ಭೇಟಿಯನ್ನು ಉಲ್ಲೇಖಿಸಿದ್ದಾರೆ. “ಈ ಸನ್ನಿವೇಶದ ಬಗ್ಗೆ ವಿವರಣೆ ನೀಡಲು ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ.

ಪರಿಸ್ಥಿತಿಯ ಕುರಿತು ಅವರು ಯಾವುದಾದರೂ ರಾಜಕೀಯ ವ್ಯಖ್ಯಾನ ಹೊಂದಿದ್ದರೆ, ಅದನ್ನು ಅವರು ಎಷ್ಟರಮಟ್ಟಿಗೆ ಅಭಿವ್ಯಕ್ತಗೊಳಿಸುತ್ತಾರೆ ಎನ್ನುವುದು ಗೊತ್ತಿಲ್ಲ” ಎಂದಿದ್ದಾರೆ.ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅವರಿಗೆ ಎರಡನೇ ಅವಧಿ ಏಕೆ ಸಿಕ್ಕಿಲ್ಲ ಎಂದು ಟಿಎಂಸಿ ಸಂಸದ ಶಂತನು ಸೇನ್ ಪ್ರಶ್ನಿಸಿದ್ದಾರೆ.ಮೊಸಳೆ ಕಣ್ಣೀರು: ಬಿಜೆಪಿ ತಿರುಗೇಟು”ಟಿಎಂಸಿಯ ಈ ಆರೋಪಗಳು ಆಧಾರರಹಿತ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. “ಸೌರವ್ ಗಂಗೂಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಯಾವಾಗ ಪ್ರಯತ್ನಿಸಿತ್ತೋ ನಮಗಂತೂ ಗೊತ್ತಿಲ್ಲ.

ಸೌರವ್ ಗಂಗೂಲಿ ಅವರು ಕ್ರಿಕೆಟ್‌ನ ದಂತಕಥೆ. ಬಿಸಿಸಿಐನಲ್ಲಿನ ಬದಲಾವಣೆಗಳ ಬಗ್ಗೆ ಕೆಲವು ವ್ಯಕ್ತಿಗಳು ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅವರು ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗ ಅವರದ್ದೇನಾದರೂ ಪಾತ್ರವಿತ್ತೇ? ಪ್ರತಿ ವಿಷಯವನ್ನು ರಾಜಕೀಯಗೊಳಿಸುವುದನ್ನು ಟಿಎಂಸಿ ನಿಲ್ಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಗಂಗೂಲಿ ಸ್ಥಾನಕ್ಕೆ ರೋಜರ್ ಬಿನ್ನಿ1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಉಮೇದುವಾರಿಕೆ ಸಲ್ಲಿಸಲಿದ್ದರು. ಅಕ್ಟೋಬರ್ 18ರಂದು ಮುಂಬಯಿಯಲ್ಲಿ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದ್ದು, ಅದರಲ್ಲಿ ಬಿನ್ನಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೆ ಜಯ್ ಶಾ ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಎದುರಾಗಿ ಬೇರೆ ಯಾವುದೇ ಅಭ್ಯರ್ಥಿ ಕಣಕ್ಕಿಳಿಯದ ಕಾರಣ, ಎರಡನೇ ಅವಧಿಗೆ ಅವರು ಮುಂದುವರಿಯಲಿದ್ದಾರೆ. ಐಸಿಸಿ ಮಂಡಳಿಯಲ್ಲಿ ಗಂಗೂಲಿ ಅವರ ಸ್ಥಾನಕ್ಕೆ ಭಾರತದ ಪ್ರತಿನಿಧಿಯಾಗಿ ಜಯ್ ಶಾ ಭಾಗವಹಿಸಲಿದ್ದಾರೆ.ಸೌರವ್ ಗಂಗೂಲಿ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಮತ್ತು ಟಿಎಂಸಿ ಎರಡೂ ಸಾಕಷ್ಟು ಸಾಹಸಪಟ್ಟಿವೆ.

ಆದರೆ ಗಂಗೂಲಿ ಅವರು ರಾಜಕೀಯದಿಂದ ದೂರ ಉಳಿದಿದ್ದು, ಕ್ರಿಕೆಟ್ ಆಡಳಿತದ ಕಡೆಗೆ ಗಮನ ಹರಿಸಿದ್ದರು. ಅಮಿತ್ ಶಾ ಅವರಿಗೆ ಗಂಗೂಲಿ ಡಿನ್ನರ್ ಆಯೋಜಿಸಿದ್ದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ ಅಮಿತ್ ಶಾ ಅವರನ್ನು ಬಹಳ ಕಾಲದಿಂದ ತಾವು ಬಲ್ಲವರಾಗಿದ್ದು, ಔತಣಕ್ಕೆ ಆಹ್ವಾನಿಸುವುದರಲ್ಲಿ ಯಾವುದೇ ವಿಶೇಷ ಅರ್ಥ ಬೇಕಿಲ್ಲ ಎಂದು ಗಂಗೂಲಿ ಹೇಳಿದ್ದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button