ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ’

ರಾಜ್ಯದ ಬಿಜೆಪಿ ಸರ್ಕಾರ ‘ಟೇಕ್ ಆಪ್’ ಆಗದೆ 2021ರಲ್ಲಿಯೇ ಉಳಿದುಬಿಟ್ಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳವಾರ ವಿಧಾನಸೌಧದಲ್ಲಿ ‘ಮೈಸೂರು ದಸರಾ-2022’ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಪ್ರಸಕ್ತ ಸಾಲಿನ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು. ಆದರೆ ದಸರಾ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಹಿಂದಿನ ವರ್ಷದ ದಿನಾಂಕ ಮುದ್ರಿಸಿರುವುದು ದೊಡ್ಡ ಎಡವಟ್ಟಾಗಿತ್ತು.
ಅಲ್ಲಿ 2022ರ ಬದಲು 2021 ಎಂದು ಮುದ್ರಿಸಲಾಗಿತ್ತು.ಇಸವಿ ದೋಷವಾಗಿರುವ ದಸರಾ ಪೂರ್ವಭಾವಿ ಸಭೆಯ ಕಾರ್ಯಸೂಚಿ ಪಟ್ಟಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ ‘ರಾಜ್ಯದ ಬಿಜೆಪಿ ಸರ್ಕಾರ 2021ರಲ್ಲಿಯೇ ಉಳಿದುಬಿಟ್ಟಿದೆ.
ಸರ್ಕಾರ ‘ಟೇಕ್ ಆಫ್’ ಆಗಿಯೇ ಇಲ್ಲ ಎನ್ನುವುದಕ್ಕೆ ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೇ’ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಇತ್ತೀಚೆಗಷ್ಟೇ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ ತೆಗೆಯುವುದು ಮತ್ತು ವಿಡಿಯೋ ಮಾಡುವುದನ್ನು ನಿಷೇಧಿಸಿ ಹೊರಡಿಸಿದ್ದ ಆದೇಶ ಪ್ರತಿಯಲ್ಲಿ ಅನೇಕ ಕನ್ನಡ ಅಕ್ಷರಗಳನ್ನು ತಪ್ಪು ತಪ್ಪಾಗಿ ಟೈಪಿಸಲಾಗಿತ್ತು.
ಇದು ರಾಜ್ಯ ಸರ್ಕಾರವನ್ನು ನಗೆಪಾಟಲಿಗೆ ಈಡುಮಾಡಿತ್ತು.