ರಾಜಕೀಯ

ಬಿಜೆಪಿಯವರಿಗೆ ಜನರ ಜೀವನ, ಸಮಸ್ಯೆ ಮುಖ್ಯವಲ್ಲ, ಅವರ ನಾಯಕರುಗಳ ಅನುಕೂಲ ಮುಖ್ಯ’

ಬೆಂಗಳೂರು: ‘ರಸ್ತೆಗುಂಡಿಗಳ ವಿಚಾರವಾಗಿ ಮಾಧ್ಯಮಗಳು ಅಭಿಯಾನ ಮಾಡಿದರೂ ಈ ಸರಕಾರ ಅರಿಯಲಿಲ್ಲ. ಜನ ತೊಂದರೆ ಅನುಭವಿಸುವಾಗ ರಸ್ತೆ ಗುಂಡಿ ಮುಚ್ಚಲಿಲ್ಲ. ತಮ್ಮ ನಾಯಕರು ಬರುತ್ತಿದ್ದಾರೆ ಎಂದ ತಕ್ಷಣ ರಸ್ತೆಗೆ ಡಾಂಬರು ಹಾಕಿದರು.

ಅವರ ಆದ್ಯತೆ ಜನರಲ್ಲ, ಅವರ ನಾಯಕರು.ಅವರಿಗೆ ಜನರ ಜೀವನ, ಸಮಸ್ಯೆ ಮುಖ್ಯವಲ್ಲ, ಅವರ ನಾಯಕರುಗಳ ಅನುಕೂಲ ಮುಖ್ಯ ಎಂಬುದು ಸಾಬೀತಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದ್ದಾರೆ.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಉತ್ತರಿಸಿದ ಅವರು, ‘ಬಿಜೆಪಿ ನಾಯಕರು ಊರು ತುಂಬಾ ಫ್ಲೆಕ್ಸ್, ಬಾವುಟ ಹಾಕಿದ್ದರು.

ಆದರೆ ಕಾಂಗ್ರೆಸ್ ನಾಯಕರು ಹಾಕಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಪದ್ಮನಾಭನಗರದ ಕಾಂಗ್ರೆಸ್ ಕಚೇರಿ ಒಳಗೆ ಕಟೌಟ್ ಹಾಕಿದ್ದಕ್ಕೆ ನೊಟೀಸ್ ನೀಡಿದ್ದಾರೆ. ಈಗ ಬೆಂಗಳೂರು ತುಂಬಾ ಬಿಜೆಪಿ ಹಾಕಿದ್ದರೂ ಪಾಲಿಕೆ ಆಯುಕ್ತರು, ಪೊಲೀಸ್ ಕಮಿಷನರ್ ಯಾವುದೇ ಕೇಸ್ ಹಾಕಿಲ್ಲ ಯಾಕೆ?’ ಎಂದು ಕಿಡಿಕಾರಿದರು.ಕಾನೂನು ಹೋರಾಟ ಮಾಡುತ್ತಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ, ‘ನಮ್ಮ ಮೇಲೆ ಕಾನೂನು ಬಳಸಿ ಪ್ರಕರಣ ದಾಖಲಿಸಿ, ಅವರಿಗೆ ಪ್ರಕರಣ ದಾಖಲಿಸದಿದ್ದಾಗ ಅವರ ವಿರುದ್ದ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

ನಾವು ಆ ಬಗ್ಗೆ ಕೆಲಸ ಮಾಡುತ್ತಿದ್ದೇವೆ. ಶಿವಮೊಗ್ಗದಲ್ಲಿ ಈಶ್ವರಪ್ಪನವರು ಕೇವಲ 144 ಸೆಕ್ಷನ್ ಉಲ್ಲಂಘನೆ ಅಷ್ಟೇ ಅಲ್ಲ, ಸಾರ್ವಜನಿಕ ಆಸ್ತಿ ನಾಶ ಮಾಡಿದರು. ಆದರೂ ಅಲ್ಲಿನ ಎಸ್ ಪಿ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ’ ಎಂದು ಹೇಳಿದರು.ಕಾಂಗ್ರೆಸ್ ನಾಯಕರ ಮೇಲಿನ ಇಡಿ ತನಿಖೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ರಾಷ್ಟ್ರೀಯ ನಾಯಕರಿಗೆ ಇಡಿ ಅವರು ವಿಚಾರಣೆ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ಅವರ ವಿಚಾರಣೆ ದ್ವೇಷ ರಾಜಕಾರಣಕ್ಕೆ ಸಾಕ್ಷಿ.

ಇಲ್ಲದಿರುವ ಪ್ರಕರಣವನ್ನು ಅವರ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದು, ಎಲ್ಲರಿಗೂ ಇದೊಂದು ಕುತಂತ್ರ ಎಂದು ಅರ್ಥವಾಗಿದೆ. ಅಧಿಕಾರಿಗಳು ವಿಚಾರಣೆ ಮಾಡಲಿ, ಆದರೆ ಐದು ದಿನಗಳ ಕಾಲ ವಿಚಾರಣೆ ಮಾಡುವ ಅಗತ್ಯವಿಲ್ಲ. ಅವರಿಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ. ಇನ್ನು ನನ್ನ ಪ್ರಕರಣದಲ್ಲಿ 3 ವರ್ಷಗಳ ಹಿಂದೆ ಆರೋಪಪಟ್ಟಿ ಸಲ್ಲಿಸಬೇಕಿತ್ತು. ಈಗ ಹಾಕಿದ್ದಾರೆ.

ಈ ಮಧ್ಯೆ, ದೇಶದಲ್ಲಿ ಎಲ್ಲೂ ಇಲ್ಲದ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಸಿಬಿಐ ವಿಚಾರಣೆಗೆ ಸರಕಾರ ಅನುಮತಿ ನೀಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಎಲ್ಲ ದಾಖಲೆ ಸಲ್ಲಿಸಿದ್ದು, ಈಗ ಮತ್ತೆ 5 ಜನಕ್ಕೆ ನೊಟೀಸ್ ನೀಡಿದ್ದಾರೆ. ನಾವು ಏನು ಉತ್ತರ ನೀಡಬೇಕೋ ನೀಡುತ್ತೇವೆ.ಈ ವಿಚಾರವಾಗಿ ಬಹಳ ಮಾತನಾಡುವುದಿದೆ. ಬಿಜೆಪಿಯವರು ಏನೆಲ್ಲಾ ಮಾತನಾಡುತ್ತಾರೋ ಮಾತನಾಡಲಿ. ನಂತರ ನಾನು ಮಾತನಾಡುತ್ತೇನೆ.

ನನಗೆ ಬಂದಿರುವ ಸಮನ್ಸ್ ಪ್ರಕಾರ ಜುಲೈ 1ನೇ ತಾರೀಕು ಇಡಿ ಕೋರ್ಟ್ ಗೆ ಹಾಜರಾಗಬೇಕಾಗಿದೆ. ಸಾಮಾನ್ಯವಾಗಿ ಆರೋಪಪಟ್ಟಿ ಸಲ್ಲಿಸಿದ ನಂತರ ಸಮನ್ಸ್ ನೀಡುತ್ತಾರೆ.

ನನಗೆ ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ದೊರೆತಿದ್ದು, ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಉತ್ತರಿಸಿದರು.

ಮಾಜಿ ಸಚಿವ ಸೀತಾರಾಮ್ ಅವರು ಅಸಮಾಧಾನದಿಂದ ಸಭೆ ನಡೆಸುತ್ತಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನೀವು ಬಿಜೆಪಿಯಲ್ಲಿನ ಅಸಮಾಧಾನದ ಬಗ್ಗೆ ಮಾತನಾಡುವುದಿಲ್ಲ. ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ ಅವರು ಏನು ಹೇಳಿದ್ದಾರೆ ಎಂದು ನೋಡುವುದಿಲ್ಲ. ಸೀತರಾಮ್ ಅವರು ಚರ್ಚೆ ಮಾಡಲಿ. ನನಗೆ ಆ ಬಗ್ಗೆ ಯಾವುದೇ ವರದಿ ಬಂದಿಲ್ಲ.

ಆ ಸಭೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ತಿಳಿಸಿದರು.ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಮಧ್ಯರಾತ್ರಿ ರಾಜ್ಯಪಾಲರನ್ನು ಕರೆಸಿ ಬೆಳಗಿನ ಜಾವ ಪ್ರಮಾಣವಚನ ಸ್ವೀಕರಿಸಿದ್ದರು. ಅದನ್ನು ನೋಡಿದ ಮೇಲೆ ಪ್ರಜಾಪ್ರಭುತ್ವ ಎಲ್ಲಿದೆ ಎಂದೆನಿಸಿತ್ತು. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಲೇ ಇದೆ. ಯಾವ ರಾಜ್ಯದಲ್ಲೂ ವಿರೋಧ ಪಕ್ಷಗಳು ಇರಲೇಬಾರದು ಎಂದು ಬಿಜೆಪಿ ಪ್ರಯತ್ನಿಸುತ್ತಿದೆ.

ಜನ ಇದ್ದಾರೆ. ಅವರ ಧ್ವನಿ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.ಪಠ್ಯ ಪರಿಷ್ಕರಣೆ ವಿಚಾರವಾಗಿ ಆರ್ ಅಶೋಕ್ ಅವರ ಪತ್ರಿಕಾಗೋಷ್ಠಿ ಕುರಿತು ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರ ಕಾಲದಲ್ಲಿ ತಪ್ಪಿದ್ದರೆ, ಆಗ ಅವರು ಬಾಯಿ ಮುಚ್ಚಿಕೊಂಡು ಕೂತಿದ್ದು ಯಾಕೆ? ಅವತ್ತು ಯಾಕೆ ಪ್ರಶ್ನೆ ಮಾಡಲಿಲ್ಲ? ಕಾಂಗ್ರೆಸ್ ಪಕ್ಷಕ್ಕಿಂತ ಜನರೇ ಇದನ್ನು ಹೆಚ್ಚಾಗಿ ವಿರೋಧಿಸುತ್ತಿದ್ದಾರೆ’ ಎಂದು ಉತ್ತರಿಸಿದರು.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button