ರಾಜ್ಯ

ಬಾಲ್ಯ ವಿವಾಹ: ಜಾರ್ಖಂಡ್‌ನಲ್ಲಿ ಅತ್ಯಧಿಕ, ಕೇರಳದಲ್ಲಿ ಶೂನ್ಯ

ರಾಂಚಿ: ಬಾಲ್ಯ ವಿವಾಹ ತಡೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಾನಾ ಜಾಗೃತಿಕ ಕಾರ್ಯಕ್ರಮಗಳನ್ನು ಹಾಗೂ ಬಿಗಿ ನಿಯಮಗಳನ್ನು ಜಾರಿಗೊಳಿಸುತ್ತಿದ್ದರೂ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ದೇಶದಲ್ಲೇ ಜಾರ್ಖಂಡ್‌ನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬ ಸಂಗತಿಯು ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿಯ ಸಮೀಕ್ಷೆಯಿಂದ ಬಯಲಾಗಿದೆ.

ಜಾರ್ಖಂಡ್‌ನಲ್ಲಿ ವಯಸ್ಸಿಗೆ ಬರುವ ಮೊದಲೇ (18 ವರ್ಷ ತುಂಬುವ ಮೊದಲು) ಮದುವೆಯಾಗುವ ಬಾಲಕಿಯರ ಪ್ರಮಾಣ ಶೇಕಡ 5.8ರಷ್ಟಿದೆ ಎಂದು ಗೃಹ ಸಚಿವಾಲಯದ ರಿಜಿಸ್ಟ್ರಾರ್‌ ಜನರಲ್‌ ಮತ್ತು ಜನಗಣತಿ ಆಯುಕ್ತರ ಕಚೇರಿ ನಡೆಸಿದ ಸಮೀಕ್ಷೆಯು ತಿಳಿಸಿದೆ.

18 ವರ್ಷ ತುಂಬುವ ಮೊದಲೇ ವಿವಾಹವಾಗುವ ಮಹಿಳೆಯರ ಶೇಕಡವಾರು ಪ್ರಮಾಣ ರಾಷ್ಟ್ರೀಯ ಮಟ್ಟದಲ್ಲಿ 1.9ರಷ್ಟಿದೆ. ಕೇರಳದಲ್ಲಿ ಈ ಪ್ರಮಾಣವು ಶೂನ್ಯ ಇದ್ದರೆ, ಜಾರ್ಖಂಡ್‌ನಲ್ಲಿ ಶೇ. 5.8ರಷ್ಟಿದೆ. ಜಾರ್ಖಂಡ್‌ನಲ್ಲಿ ನಡೆಯುವ ಬಾಲ್ಯ ವಿವಾಹಗಳ ಪೈಕಿ ಶೇ 7.3ರಷ್ಟು ಗ್ರಾಮೀಣ ಭಾಗದಲ್ಲಿ ಹಾಗೂ ಶೇ 3ರಷ್ಟು ನಗರ ಪ್ರದೇಶಗಳಲ್ಲಿ ನಡೆಯುತ್ತಿವೆ.

ಜಾರ್ಖಂಡ್‌ನಂತೆ ಪಶ್ಚಿಮ ಬಂಗಾಳದಲ್ಲೂ ಇದೇ ಪರಿಸ್ಥಿತಿ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಪಶ್ಚಿಮ ಬಂಗಾಳದಲ್ಲಿ 21 ವರ್ಷ ತುಂಬುವ ಮೊದಲೇ ಶೇ 54.9ರಷ್ಟು ಹುಡುಗಿಯರು ವಿವಾಹ ಮಾಡಿಕೊಳ್ಳುತ್ತಿದ್ದರೆ, ಜಾರ್ಖಂಡ್‌ನಲ್ಲಿ ಇದರ ಪ್ರಮಾಣ ಶೇ. 54.6 ರಷ್ಟಿದೆ.

ಮಾಟಮಂತ್ರದಲ್ಲಿಯೂ ಜಾರ್ಖಂಡ್‌ ಅಪಖ್ಯಾತಿ ಪಡೆದಿದೆ. ಪ್ರತಿ ವರ್ಷ ಹತ್ತಾರು ಮಂದಿ ಬ್ಲ್ಯಾಕ್‌ ಮ್ಯಾಜಿಕ್‌ಗೆ ಬಲಿಯಾಗುತ್ತಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೊ ಪ್ರಕಾರ, 2015ರಲ್ಲಿ ಜಾರ್ಖಂಡ್‌ನಲ್ಲಿ ಮಾಟಮಂತ್ರ ಆರೋಪದ ಮೇಲೆ 32, 2016ರಲ್ಲಿ 27, 2017ರಲ್ಲಿ 19, 2018, 2019 ಮತ್ತು 2020ರಲ್ಲಿ ತಲಾ 15 ಜನರನ್ನು ಕೊಂದು ಹಾಕಲಾಗಿದೆ.

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button