
ಬಸ್ ಸ್ಟೇಷನ್, ರೈಲ್ವೆ ಸ್ಟೇಷನ್, ಅಥವಾ ಯಾವುದೇ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನನ್ನು ಚಾರ್ಜ್‌ಗೆ ಹಾಕುವ ಮೊದಲು ಎರಡು ಬಾರಿ ಯೋಚಿಸಿ.
ಏಕೆಂದರೆ, ಹೈದರಬಾದ್ ವ್ಯಕ್ತಿಯೋರ್ವರು ಹೀಗೆ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ಮಾರ್ಟ್‌ಪೋನನ್ನು ಚಾರ್ಜ್‌ಗೆ ಹಾಕಿ ಬರೋಬ್ಬರಿ 16 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ಹೌದು, ಇಂತಹದೊಂದು ಭಯಾನಕ ಸುದ್ದಿ ವರದಿಯಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಸ್ಮಾರ್ಟ್‌ಫೋನನ್ನು ಚಾರ್ಜ್‌ಗೆ ಹಾಕಿದ್ದ ಹೈದರಾಬಾದ್‌ನ ಕಂಪನಿಯೊಂದರ ಸಿಇಒ ಒಬ್ಬರು ‘ಜ್ಯೂಸ್ ಜಾಕಿಂಗ್’ ವಂಚನೆಯ ಜಾಲಕ್ಕೆ ಸಿಲುಕಿ ತಮ್ಮ ಅಕೌಂಟ್‌ನಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದಾರೆ.
ಹಾಗಾದರೆ, ಏನಿದು ಭಯಾನಕ ಸುದ್ದಿ?, ಇವರ ಖಾತೆಯಿಂದ ಹಣವನ್ನು ಕದ್ದಿರುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹೈದರಾಬಾದ್‌ನ ಕಂಪನಿಯೊಂದರ ಸಿಇಒ ಒಬ್ಬರು ಸಾರ್ವಜನಿಕ ಸ್ಥಳದಲ್ಲಿ ಯುಎಸ್‌ಬಿ ಪೋರ್ಟ್ ಮೂಲಕ ಮೊಬೈಲ್ ಚಾರ್ಜ್ ಮಾಡುತ್ತಿದ್ದರು.
ಈ ಸಮಯದಲ್ಲಿ ಹ್ಯಾಕರ್‌ಗಳು ಅವರ ಡೇಟಾವನ್ನು ಕದ್ದು, ಇದರ ಸಹಾಯದಿಂದ ಅವರ ಆನ್‌ಲೈನ್ ಬ್ಯಾಂಕಿಂಗ್ ಮೂಲಕ 16 ಲಕ್ಷ ರೂ.ಕದ್ದಿರುವ ಬಗ್ಗೆ ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ.
ಈ ಪ್ರಕರಣವನ್ನು ಜ್ಯೂಸ್ ಜಾಕಿಂಗ್ ಎಂದು ಗುರುತಿಸಲಾಗಿದ್ದು, ಸ್ಮಾರ್ಟ್‌ಫೋನಿನ ಡೇಟಾವನ್ನು ಕದ್ದು ಈ ರೀತಿ ವಂಚನೆಯನ್ನು ಎಸಗಿದ್ದಾರೆ ಎಂದು ಹೇಳಲಾಗಿದೆ.
ಇದು ಒಂದು ರೀತಿಯ ಸೈಬರ್ ಅಥವಾ ವೈರಸ್ ದಾಳಿಯಾಗಿದ್ದು, ಸಾರ್ವಜನಿಕ ಸ್ಥಳಗಳಾದ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣ ಅಥವಾ ಮಾಲ್‌ನಲ್ಲಿ ಬಳಸುವ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮೂಲಕ ಅಪರಾಧಿಗಳು ಯಾವುದೇ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಅಥವಾ ಇತರ ಸಾಧನಗಳಲ್ಲಿ ಮಾಲ್‌ವೇರ್ ಅಥವಾ ವೈರಸ್ ಸ್ಥಾಪಿಸುವ ಮೂಲಕ ವೈಯಕ್ತಿಕ ಡೇಟಾವನ್ನು ಕದಿಯುತ್ತಾರೆ. ಈ ಪ್ರಕ್ರಿಯೆಯನ್ನು ಜ್ಯೂಸ್ ಜಾಕಿಂಗ್ ಎಂದು ಕರೆಯಲಾಗುತ್ತದೆ.
ನಿಮಗೆ ತಿಳಿದಿರುವುದಂತೆ, ನಿಮ್ಮ ಸ್ಮಾರ್ಟ್‌ಫೋನಿನ ಡೇಟಾವನ್ನು ಯುಎಸ್‌ಬಿ ಕೇಬಲ್‌ನಿಂದ ವರ್ಗಾವಣೆ ಮಾಡಬಹುದು.
ಇದೇ ರೀತಿ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಂಡು ವಂಚಕರು ಸ್ಮಾರ್ಟ್‌ಫೋನಿಲ್ಲಿರುವ ಡೇಟಾವನ್ನು ಕದಿಯುತ್ತಾರೆ. ಇದೊಂದು ವಂಚನೆಯ ಸುಲಭ ಮಾರ್ಗವಾಗಿದೆ.
ವಂಚಕರು ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಚಾರ್ಜಿಂಗ್ ಪೋರ್ಟ್ ಇರಿಸಿರುತ್ತಾರೆ. ಈ ವೇಳೆ ಅಲ್ಲಿ ಚಾರ್ಜ್‌ಗೆ ಹಾಕಿದ್ದರೆ, ವೈರಸ್ ಹರಡುವ ಮೂಲಕ ಮೊಬೈಲ್ ಡೇಟಾವನ್ನು ಕದಿಯುತ್ತಾರೆ.
ಸ್ಮಾರ್ಟ್‌ಫೋನಿಗೆ ವೈರಸ್ ಹರಡುವ ಮೂಲಕ ಮೊಬೈಲ್ ಡೇಟಾವನ್ನು ಕದಿಯಲಾಗುತ್ತದೆ. ಅಥವಾ ಸ್ಮಾರ್ಟ್‌ಫೋನಿನ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ಕಳುಹಿಸುವ ಕಳ್ಳ ಅಪ್ಲಿಕೇಷನ್ ಅನ್ನು ಇನ್‌ಸ್ಟಾಲ್ ಮಾಡಲಾಗುತ್ತದೆ.
ಇದರಿಂದ ಮೊಬೈಲ್ ಬಳಕೆದಾರರ ಬ್ಯಾಕಿಂಗ್ ಮಾಹಿತಿ ಎಲ್ಲವೂ ಸೈಬರ್ ವಂಚಕರ ಕೈಗೆ ಸಿಗುತ್ತದೆ.
ಇಷ್ಟು ಡೇಟಾ ಸಿಕ್ಕರೆ ಸಾಕು. ಬ್ಯಾಂಕ್‌ನಲ್ಲಿರುವ ಎಲ್ಲಾ ಹಣವನ್ನು ಎಗರಿಸಲು ಸಾಧ್ಯವಾಗುತ್ತದೆ.ಈ ರೀತಿಯಲ್ಲಿ ಹಣವನ್ನು ಕದಿಯಲಾಗಿದೆ.
ಇದೇ ರೀತಿಯ ಪ್ರಕರಣವೊಂದು ಕೆಲ ಸಮಯದ ಹಿಂದೆ ದೆಹಲಿಯಲ್ಲಿ ಬೆಳಕಿಗೆ ಬಂದಿತ್ತು. ಮಹಿಳೆಯೋರ್ವರು ದೆಹಲಿ ವಿಮಾನ ನಿಲ್ದಾಣದಲ್ಲಿ ತಮ್ಮ ಫೋನ್ ಅನ್ನು ಅಲ್ಲಿರುವ ಯುಎಸ್‌ಬಿ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಚಾರ್ಜ್ ಮಾಡಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಅವರ ಫೋನ್‌ಗೆ ಹಣ ಕಡಿತಗೊಂಡಿರುವ ಸಂದೇಶ ಬಂದಿತ್ತು. ತಮ್ಮ ಬ್ಯಾಂಕ್ ಖಾತೆಯಿಂದ 1 ಲಕ್ಷದ 20 ಸಾವಿರ ಹಣ ಡ್ರಾ ಆಗಿರುವ ಬಗ್ಗೆ ಆ ಮಹಿಳೆ ಸೈಬರ್ ಸೆಲ್‌ಗೆ ದೂರು ನೀಡಿದ್ದರು.
ಎಸಿ ಪವರ್ ಸಾಕೆಟ್ ಮೂಲಕ ಡೇಟಾ ವರ್ಗಾವಣೆ ಅಥವಾ ಕಳ್ಳತನದ ಸಮಸ್ಯೆ ಇಲ್ಲ. ಚಾರ್ಜರ್ ಮೂಲಕ ನಿಮ್ಮ ಮೊಬೈಲ್‌ನೊಂದಿಗೆ ಡೇಟಾ ಸಂವಹನವನ್ನು ಮಾಡಲಾಗುವುದಿಲ್ಲ, ಆದರೆ ಯುಎಸ್‌ಬಿಗೆ ನೇರ ಯುಎಸ್‌ಬಿ ಮೂಲಕ ಡೇಟಾ ವರ್ಗಾವಣೆಯನ್ನು ಮಾಡಬಹುದು.
ಹಾಗಾಗಿ, ಸಾರ್ವಜನಿಕ ಪ್ರದೇಶಗಳಲ್ಲಿ ಸಿಗುವಂತಹ ಡೇಟಾ ಕೇಬಲ್‌ಗಳಲ್ಲಿ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಲೇಬೇಡಿ. ಈ ಬಗ್ಗೆ ಇತರರಿಗೂ ಸಹ ಅರಿವು ಮೂಡಿಸಿ.