ಅಪರಾಧ

ಬಳ್ಳಾರಿ | ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ ಪಿಎಸ್‌ಐ ಅಮಾನತು: ಜಾತಿ ನಿಂದನೆ, ಕೊಲೆ ಬೆದರಿಕೆ ದೂರು

ಕುರುಗೋಡು (ಬಳ್ಳಾರಿ): ಮಾಜಿ ಶಾಸಕರಿಗೆ ಶುಭಕೋರಿ ಅಳವಡಿಸಿದ್ದ ಬ್ಯಾನರ್‌ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ ಭೇಟಿ ನೀಡಿದ ಪಿಎಸ್‌ಐ, ಅದೇ ಗ್ರಾಮದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ವೈರಲ್‌ ಆಗಿ, ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಪಿಎಸ್‌ಐ ಅವರನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.

ಕುರುಗೋಡು ಪಿಎಸ್‌ಐ ಮಣಿಕಂಠ ಅಮಾನತುಗೊಂಡವರು. ಕೋಳೂರು ಗ್ರಾಮದಲ್ಲಿ ಮಾಜಿ ಶಾಸಕ ಟಿ.ಎಚ್‌.ಸುರೇಶ್‌ ಬಾಬು ಭಾವಚಿತ್ರವಿರುವ ಶುಭಕೋರಿದ ಬ್ಯಾನರ್‌ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಮಣಿಕಂಠ ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿಅದೇ ಗ್ರಾಮದ ಹೊನ್ನೂರಸ್ವಾಮಿ ಎಂಬುವವರ ಮೇಲೆ ಹಲ್ಲೆನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಘಟನೆ ಆ.10ರಂದು ನಡೆದಿತ್ತು.

ವಿಡಿಯೊ ವೈರಲ್‌ ಹಿನ್ನೆಲೆ ಶುಕ್ರವಾರ ಪಿಎಸ್‌ಐ ವಿರುದ್ಧ ಕುರುಗೋಡು ಪೊಲೀಸ್‌ ಠಾಣೆಯ ಎದುರು ಹಲ್ಲೆಗೊಳಗಾದ ವ್ಯಕ್ತಿ ಸೇರಿ ಅನೇಕರು ಪ್ರತಿಭಟನೆ ನಡೆಸಿ ಕ್ರಮಕ್ಕೆ ಒತ್ತಾಯಿಸಿದ್ದರು.

ಎಎಸ್ಪಿ ಎಂ.ಎ.ನಟರಾಜ ಸೇರಿದಂತೆ ಪೊಲೀಸರು ಮನವೊಲಿಸಿದರೂ ಪ್ರತಿಭಟನೆಯಿಂದ ಹಿಂದೆ ಸರಿಯದ ಪ್ರತಿಭಟನಾಕರರು ಪಿಎಸ್‌ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎಫ್‌ಐಆರ್‌ ಪ್ರತಿಯನ್ನು ಪಡೆದ ನಂತರ ಪ್ರತಿಭಟನೆ ಹಿಂಪಡೆದರು.

ಏನಿದು ಪ್ರಕರಣ?:ಕೋಳೂರು ಗ್ರಾಮದಲ್ಲಿ ಜು.30ರಂದು ಪತ್ತೆಯಾದ ಮಹಿಳೆಯ ಶವ ನೋಡಲು ಗ್ರಾಮದ ನೂರಾರು ಜನತೆ ಜಮಾಯಿಸಿದ್ದರು. ಜನರನ್ನು ಚದುರಿಸಲು ಪಿಎಸ್‌ಐ ಮಣಿಕಂಠ ಲಾಠಿ ಬೀಸಿದಾಗ ಹೊನ್ನೂರಸ್ವಾಮಿ ಎಂಬುವವರ ಕಾಲಿಗೆ ಪೆಟ್ಟಾಗಿದ್ದು, ಈ ಸಂದರ್ಭದಲ್ಲಿ ಪಿಎಸ್‌ಐ ಮತ್ತು ಊರಿನ ಕೆಲ ಜನರ ಮಧ್ಯೆ ಮಾತಿನ ಚಕಮಕಿ ನಡೆದು, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.

ಬಳಿಕ ಶಾಸಕ ಗಣೇಶ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರು, ಪೊಲೀಸರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು. ಈ ವೇಳೆ ಕಾಲಿಗೆ ಪೆಟ್ಟಾಗಿದ್ದ ಹೊನ್ನೂರಸ್ವಾಮಿಯನ್ನು ಚಿಕಿತ್ಸೆಗೆಂದು ವಿಮ್ಸ್‌ಗೆ ದಾಖಲಿಸಲಾಗಿತ್ತು.

ಆಕ್ರೋಶಕ್ಕೆ ಕಾರಣವೇನು?:ಜು.30ರಂದು ನಡೆದ ಘಟನೆಯಲ್ಲಿ ಪಿಎಸ್‌ಐ ಅವರನ್ನು ಹೊಡೆಯಲಾಗಿದೆ ಎಂದು ಕೆಲವೊಬ್ಬರು ಹೇಳಿಕೊಂಡು ಸುತ್ತಾಡಿ, ಸ್ಟೇಟಸ್‌ ಇಟ್ಟುಕೊಂಡಿದ್ದಾರೆ ಎಂಬ ಆರೋಪ ಮತ್ತು ಕಾಲಿಗೆ ಪೆಟ್ಟಾಗಿದ್ದ ಹೊನ್ನೂರಸ್ವಾಮಿ ಎಂಬ ವ್ಯಕ್ತಿ ಕೆಲವೇ ದಿನದಲ್ಲಿಯೇ ಮೊಹರಂನಲ್ಲಿ ಪಾಲ್ಗೊಂಡು ಅಲಾಯಿ ಕುಣಿದಿರುವುದು ಹಾಗೂ ಪಿಎಸ್‌ಐ ಅವರು ಕಾಲು ಮುರಿದಿದ್ದಾರೆಂದು ಅವರ ವಿರುದ್ಧ ಅಪಪ್ರಚಾರ ನಡೆಸಿದ ಮಾತುಗಳು ಕೇಳಿಬಂದಿದ್ದು, ಪಿಎಸ್‌ಐ ಮಣಿಕಂಠ ಅವರ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.

ಈ ಹಿನ್ನೆಲೆ ಬ್ಯಾನರ್‌ ಹರಿದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.10ರಂದು ಕೋಳೂರು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶ್‌ ಬಾಬು ಬೆಂಬಲಿಗರು ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹೊನ್ನೂರಸ್ವಾಮಿ ಸೇರಿ ಅನೇಕರ ಮೇಲೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಪಿಎಸ್‌ಐ ಮಣಿಕಂಠ ಅವರು ಸಾರ್ವಜನಿಕರ ಎದುರೇ ಹೊನ್ನೂರಸ್ವಾಮಿ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ರಾತ್ರಿ ವರ್ಗಾವಣೆ, ಸಂಜೆ ಅಮಾನತು:ಆ.10ರಂದು ಪಿಎಸ್‌ಐ ನಡೆಸಿದ ಹಲ್ಲೆ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್‌ ಇಲಾಖೆ ಪಿಎಸ್‌ಐ ಮಣಿಕಂಠ ಅವರನ್ನು ಗುರುವಾರ ರಾತ್ರಿ ಬಳ್ಳಾರಿ ಡಿವೈಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿತ್ತು.

ಶುಕ್ರವಾರ ಬೆಳಗ್ಗೆ ಪಿಎಸ್‌ಐ ವಿರುದ್ಧ ಕುರುಗೋಡು ಪೊಲೀಸ್‌ ಠಾಣೆಯ ಎದುರು ಹಲ್ಲೆಗೊಳಗಾದ ಹೊನ್ನೂರಸ್ವಾಮಿ ಸೇರಿದಂತೆ ಅನೇಕರು ಪ್ರತಿಭಟನೆ ನಡೆಸಿ ಅಮಾನತಿಗೆ ಒತ್ತಾಯಿಸಿ, ದೂರು ದಾಖಲಿಸಿದ್ದರು. ಈ ಹಿನ್ನೆಲೆ ಶುಕ್ರವಾರ ಸಂಜೆ ಪೊಲೀಸ್‌ ಇಲಾಖೆಯಿಂದ ಪಿಎಸ್‌ಐ ಮಣಿಕಂಠ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪಿಎಸ್‌ಐ ವಿರುದ್ಧ ದೂರು ದಾಖಲು:ಕುರುಗೋಡು ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಹಲ್ಲೆಗೊಳಗಾದ ಹೊನ್ನೂರಸ್ವಾಮಿ ಎಂಬುವವರು ಪಿಎಸ್‌ಐ ಮಣಿಕಂಠ ವಿರುದ್ಧ ಅಶ್ಲೀಲ ಪದ ಬಳಕೆ ಕುರಿತು ದೂರು ದಾಖಲಿಸಿದ್ದಾರೆ.* ಕೋಳೂರು ಗ್ರಾಮದಲ್ಲಿಸಾರ್ವಜನಿಕವಾಗಿ ಹೊನ್ನೂರಸ್ವಾಮಿ ಎಂಬುವವರ ಮೇಲೆ ಪಿಎಸ್‌ಐ ಮಣಿಕಂಠ ಹಲ್ಲೆನಡೆಸಿರುವುದು ಸರಿಯಲ್ಲ.

ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಅವರು ಅಮಾನತುಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸಲು ತೋರಣಗಲ್ಲು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಕುರುಗೋಡು ಠಾಣೆಗೆ ನೂತನವಾಗಿ ಪಿಎಸ್‌ಐ ಎನ್‌.ರಘು ಅವರನ್ನು ನಿಯೋಜಿಸಲಾಗಿದೆ.- ಸೈದುಲು ಅಡಾವತ್‌ ಎಸ್ಪಿ ಬಳ್ಳಾರಿ

Basaveshwara M

Crime reporter, Bangalore

Related Articles

Leave a Reply

Your email address will not be published. Required fields are marked *

Back to top button