ಬಂಡೇಮಠ ಶ್ರೀ ಆತ್ಮಹತ್ಯೆ ಮತ್ತೊಬ್ಬ ಸ್ವಾಮೀಜಿಗೆ ಪೊಲೀಸ್ ಗಾಳ

ಮಾಗಡಿ ತಾಲೂಕಿನ ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ ಸಂಬಂಧ ಬಸವೇಶ್ವರ ನಗರದ ವೀರಶೈವ ಲಿಂಗಾಯತ ಮುಖಂಡರೊಬ್ಬರಿಗೆ ಪೊಲೀಸ್ ನೋಟಿಸ್ ನೀಡಲಾಗಿದೆ.ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ನಲ್ಲಿ ವೀರಶೈವ ಲಿಂಗಾಯತ ಮುಖಂಡ ಸಚ್ಚಿದಾನಂದ ಮೂರ್ತಿ ಹೆಸರು ಉಲ್ಲೇಖ ಆಗಿದ್ದರಿಂದ ಮಾಗಡಿ ಪೋಲಿಸರು ನೋಟಿಸ್ ನೀಡಿದ್ದಾರೆ.
ಸಚ್ಚಿದಾನಂದ ಮೂರ್ತಿಯಿಂದಲೂ ಅಪಪ್ರಚಾರ ಎಂದು ಬಸವಲಿಂಗ ಶ್ರೀಗಳು ಬರೆದಿದ್ದರು. ಹೆಸರು ಪ್ರಸ್ತಾಪ ಹಿನ್ನೆಲೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಪ್ರಕರಣ ಸಂಬಂಧ ಮಾಹಿತಿ ಕಲೆಹಾಕುವ ನಿಟ್ಟನಲ್ಲಿ ವಿಚಾರಣೆ ನಡೆಸಲಾಗುತ್ತದೆ.
ಪ್ರಕರಣ ಸಂಬಂಧ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಮೂವರು ಆರೋಪಿಗಳು ವಿಚಾರ ವೇಳೆ ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಡೆತ್‌ನೋಟ್‌ನಲ್ಲಿ ಇಬ್ಬರು ಶ್ರೀಗಳಿಂದ ತೊಂದರೆ ಆಗುತ್ತಿದೆ ಎಂದು ಬಸವಲಿಂಗ ಶ್ರೀ ಉಲ್ಲೇಖಿಸಿದ್ದಾರೆ.
ಇದನ್ನು ಬೆನ್ನತ್ತಿರುವ ಪೊಲೀಸರು ಆ ಮತ್ತೊಬ್ಬ ಪ್ರತಿಷ್ಠಿತ ಮಠದ ಶ್ರೀಗೂ ಬಲೆ ಬೀಸಿದ್ದಾರೆ. ಬಂಧಿತ ಮೂವರು ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಷ್ಟು ಆಶ್ಚರ್ಯಕರ ವಿಚಾರಗಳನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.ಬಸವಲಿಂಗ ಶ್ರೀಗೆ ಕಿರುಕುಳ ನೀಡಿದ್ದ ಆ ಮತ್ತೊಂದು ಮಠದ ಸ್ವಾಮೀಜಿ ಯಾರು..
ಬಂಡೇಮಠಕ್ಕೂ ಆ ಮತ್ತೊಬ್ಬ ಸ್ವಾಮೀಜಿಗೂ ಏನು ಸಂಬಂಧ ಎಂಬ ಪ್ರಶ್ನೆಗಳು ಉದ್ಭವಿಸಿವೆ.ಸದ್ಯ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಆ ಮತ್ತೊಬ್ಬ ಶ್ರೀಗಳನ್ನು ವಿಚಾರಣೆ ನಡೆಸಿದ್ದಾರೆ.
ಅದು ಪ್ರತಿಷ್ಠಿತ ಮಠವೊಂದರ ಸ್ವಾಮೀಜಿ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಆದರೆ, ಈ ಕುರಿತು ಮತ್ಯಾವ ಸ್ವಾಮೀಜಿಯನ್ನೂ ವಿಚಾರಣೆ ನಡೆಸಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರೆ.