ಫೇಸ್‌ಬುಕ್ ನೀಡಿದ ಸುಳಿವಿನಿಂದ ಸಿಕ್ಕಿಬಿದ್ದ ನಾಲ್ವರು ಸರಗಳ್ಳರು..!

ಫೇಸ್‍ಬುಕ್ ನೀಡಿದ ಸುಳಿವಿನ ಆಧಾರದ ಮೇರೆಗೆ ಸರಗಳ್ಳರ ಬೆನ್ನತ್ತಿದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ನಾಲ್ವರು ಸರಗಳ್ಳರನ್ನು ಬಂಧಿಸಿ 13.5 ಲಕ್ಷ ಮೌಲ್ಯದ 300 ಗ್ರಾಂ.
ತೂಕದ 7 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ. ಕೃಷ್ಣ, ಪ್ರಜ್ವಲ್ ಹಾಗೂ ಇವರಿಗೆ ಸಹಕರಿಸಿದ ಇಬ್ಬರು ಆರೋಪಿಗಳು ಸೇರಿದಂತೆ ನಾಲ್ವರು ಬಂಧಿತರು.
ಮೇ 30ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಯುವಿಹಾರಕ್ಕೆ ತೆರಳಿದ ವೃದ್ಧೆಯ ಚಿನ್ನದ ಸರ ಕಸಿದ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದರು. ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಫೋಟೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಕೃತ್ಯ ನಡೆಸುವ ಹಿಂದಿನ ದಿನ ಇದೇ ಇಬ್ಬರು ವ್ಯಕ್ತಿಗಳು ರೂಪಾನಗರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು.ಸ್ಥಳೀಯ ನಿವಾಸಿಯೊಬ್ಬರು ಇವರ ಚಲನ-ವಲನಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದರು.
ವಿಜಯನಗರದ ಕೃತ್ಯದ ನಂತರ ವ್ಯಕ್ತಿ ಫೇಸ್‍ಬುಕ್‍ನಲ್ಲಿ ಅಪ್ ಲೋಡ್ ಮಾಡಿದ್ದರು. ಈ ಸುಳಿವಿನ ಆಧಾರದ ಮೇರೆಗೆ ಕಾರ್ಯೋನ್ಮುಖರಾದ ಡಿಸಿಪಿ ಗೀತಾ ಪ್ರಸನ್ನ ಅವರು ಕೆಆರ್ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಹಾಗೂ ವಿದ್ಯಾರಣ್ಯಪುರಂ ಇನ್ಸ್‍ಪೆಕ್ಟರ್ ರಾಜು ಅವರಿಗೆ ಮಾರ್ಗದರ್ಶನ ನೀಡಿದ್ದರು.ಎಸಿಪಿ ಸ್ಕ್ವಾಡ್ ಹಳೇ ಕಳ್ಳರ ಜಾಡು ಹಿಡಿದು ಕೃಷ್ಣ ಹಾಗೂ ಪ್ರಜ್ವಲ್ ಇಬ್ಬರನ್ನೂ ಸೆರೆ ಹಿಡಿದರು.
ನಂತರ ಆರೋಪಿಗಳನ್ನು ವಶಕ್ಕೆ ಪಡೆದ ಇನ್ಸ್‍ಪೆಕ್ಟರ್ ರಾಜು ತಮ್ಮ ಸಿಬ್ಬಂದಿಗಳ ಸಹಕಾರದಿಂದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನ, 5 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸ್‍ಐ ರಂಗಸ್ವಾಮಿ, ಸಿದ್ದಭಾಯಿ, ಎಎಸ್‍ಐ ಮರಿಸ್ವಾಮಿ, ಸಿಬ್ಬಂದಿಗಳಾದ ರಮೇಶ್, ಮಹೇಶ್ವರ್, ನಟರಾಜು, ಶ್ರೀಧರ ಮೂರ್ತಿ, ರವಿ, ಧನಂಜಯ, ನಾರಾಯಣಶೆಟ್ಟಿ, ಶ್ರೀನಿವಾಸ ಮೂರ್ತಿ, ವೆಂಕಟೇಶ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದಾರೆ.
ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಏಳು ಸರಗಳ್ಳತನ ಪತ್ತೆಯಾಗಿದೆ.