
ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಆಯೋಜಿಸಿದ್ದ ಪಾರ್ಟಿ ವೇಳೆ 3 ವರ್ಷದ ಬಾಲಕನೊಬ್ಬ 5ನೇ ಮಹಡಿಯಿಂದ ಬಿದ್ದು ಮೃತಪಟ್ಟ ದಾರಣ ಘಟನೆ ಮುಂಬೈನಲ್ಲಿ ನಡೆದಿದೆ.
ಭಾನುವಾರ ನಡೆದ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆ ಜೊತೆಗೆ ಆಯೋಜಿಸಿದ್ದ ಪಾರ್ಟಿಗೆ ಹೃದಂಶ್ ರಾಥೋಡ್ ಕುಟುಂಬದ ಸದಸ್ಯರ ಜೊತೆ ಚರ್ಚ್ ಗೇಟ್ ಬಳಿಯ ಗರ್ ವಾರೆ ಕ್ಲಬ್ ಗೆ ಕುಟುಂಬದ ಸಮೇತ ತೆರಳಿದ್ದ.
ಕಟ್ಟಡದ 6ನೇ ಮಹಡಿಯಲ್ಲಿ ಫುಟ್ಬಾಲ್ ಪಂದ್ಯದ ನೇರಪ್ರಸಾರವನ್ನು ಬೃಹತ್ ತೆರೆಯ ಮೇಲೆ ಪ್ರಸಾರ ಮಾಡಲಾಗುತ್ತಿತ್ತು.
ಈ ವೇಳೆ ಬಾಲಕ 5ನೇ ಮಹಡಿಯಲ್ಲಿರುವ ಶೌಚಾಲಯಕ್ಕೆ ತೆರಳಿದ್ದ.ರಾತ್ರಿ ಸುಮಾರು 10.40ರ ಸುಮಾರಿಗೆ 11 ವರ್ಷದ ಸೋದರ ಸಂಬಂಧಿ ವೀವನ್ ಜೊತೆ ಮತ್ತೊಮ್ಮೆ ಶೌಚಾಲಯಕ್ಕೆ ಬಾಲಕ ಹೋಗಿದ್ದಾನೆ.
ವೀವನ್ ಹಿಂಬಾಲಿಸಿಕೊಂಡು ಬರುತ್ತಿದ್ದ ಹೃದಂಶ್ ರಾಥೋಡ್ ಜೋರಾಗಿ ಕೂಗಿಕೊಂಡ ಸದ್ದು ಕೇಳಿದಾಗ ಮೆಟ್ಟಿಲಿನಿಂದ ಜಾರಿ ಬಿದ್ದಿದ್ದಾನೆ.ಮೆಟ್ಟಿಲಿನಿಂದ ಜಾರಿ ಬಿದ್ದ ಬಾಲಕ ಉರುಳುತ್ತಾ ರಕ್ಷಣೆಗೆ ಹಾಕಿದ್ದ ಗಾಜು ಹೊಡೆದು ಮಹಡಿಯಿಂದ ಹೊರಗೆ ಬಿದ್ದು ಮೃತಪಟ್ಟಿದ್ದಾನೆ.
ಕೂಡಲೇ ವೀವನ್ ಓಡಿ ಬಂದು ಕುಟುಂಬಸ್ಥರಿಗೆ ಹೃದಂಶ್ ಮೆಟ್ಟಿಲಿನಿಂದ ಜಾರಿ ಬಿದ್ದಿರುವ ವಿಷಯ ತಿಳಿಸಿದ್ದಾನೆ.ಕುಟುಂಬಸ್ಥರು ಸ್ಥಳಕ್ಕೆ ಬಂದು ಮಗುವಿಗಾಗಿ ಹುಡುಕಾಡಿದರೆ ಎಲ್ಲೂ ಪತ್ತೆಯಾಗಿಲ್ಲ.
ಕೊನೆಯಲ್ಲಿ ಆತ ನೆಲಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ರಾತ್ರಿ 2 ಗಂಟೆ ಸುಮಾರಿಗೆ ಚಿಕಿತ್ಸೆ ಫಲ ನೀಡದ ಕಾರಣ ಮೃತಪಟ್ಟಿದ್ದಾನೆ.