
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿಯಲ್ಲಿ ಪ್ರೀತಿಸುತ್ತಿದ್ದ ಹುಡುಗಿ ತನ್ನ ಜತೆ ಬರಲು ನಿರಾಕರಿಸಿದಳೆಂದು ಆಕೆಯ ಕತ್ತು ಕೊಯ್ದ ಯುವಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಚಿಂತಾಮಣಿ ಮೂಲದ ಮಂಜುನಾಥ ಎಂಬಾತ ಇನ್ಸ್ಟಾಗ್ರಾಮ್ ಮೂಲಕ ಯುವತಿಯೊಬ್ಬಳ ಜೊತೆ ಸಂಪರ್ಕದಲ್ಲಿದ್ದನು.
ಚಾಟಿಂಗ್ ಮಾಡಿಕೊಂಡಿದ್ದ ಇಬ್ಬರೂ ಪರಸ್ಪರ ಭೇಟಿಯೂ ಆಗಿದ್ದಾರೆ. ಯುವತಿಗೆ ಮಂಜುನಾಥ ಮೊಬೈಲ್ ಕೊಡಿಸಿ ಪ್ರೀತಿಸುವಂತೆ ಯುವತಿಗೆ ಒತ್ತಾಯಿಸುತ್ತಿದ್ದನು.
ವಿಚಾರ ತಿಳಿದ ಯುವತಿಯ ಪೋಷಕರು ಬುದ್ಧಿವಾದ ಹೇಳಿ ಆಕೆಯನ್ನು ಅತ್ತೆ ಮನೆಯಲ್ಲಿರಿಸಿದ್ದರು.ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಅತ್ತೆ ಮನೆಯಲ್ಲಿರಿಸಿದ್ದ ವಿಚಾರ ತಿಳಿದ ಮಂಜುನಾಥ, ಆಕೆಗೆ ಕರೆ ಮಾಡಿ ವಿಳಾಸ ಪಡೆದು ಮನೆಗೆ ಬಂದು ತನ್ನ ಜತೆ ಬರುವಂತೆ ಒತ್ತಾಯಿಸಿದ್ದಾನೆ.
ಈ ವೇಳೆ ಯುವತಿ ನಿರಾಕರಿಸಿದಾಗ ಕೋಪಗೊಂಡ ಮಂಜುನಾಥ ಬ್ಲೇಡ್ನಿಂದ ಆಕೆಯ ಕತ್ತು ಕೊಯ್ದು ನಂತರ ತನ್ನ ಕತ್ತನ್ನೂ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಸ್ವಸ್ಥರಾಗಿದ್ದ ಯುವತಿ ಹಾಗೂ ಮಂಜುನಾಥನನ್ನು ಯುವತಿಯ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೃತ್ಯ ಸಂಬಂಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.