
ದಾವಣಗೆರೆಯಲ್ಲಿ ಪ್ರೀತಿ ನಿರಾಕರಿಸಿದ್ದ ಯುವತಿಯನ್ನು ಹಗಲಿನಲ್ಲಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಯುವತಿಯನ್ನು ಕೊಂದು ವಿಷ ಸೇವಿಸಿ ಮೃತಪಟ್ಟ ಯುವಕ ಸಾದತ್ ಅಲಿಯಾಸ್ ಚಂದ್ ಪೀರ್ (29) ಎಂದು ಗುರುತಿಸಲಾಗಿದೆ.
ದಾವಣಗೆರೆ ನಗರದ ಪಿಜೆ ಬಡಾವಣೆ ಚರ್ಚ್ ಬಳಿ ಆತ ಯುವತಿ ಚಾಂದ್ ಸುಲ್ತಾನಳನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಪೊಲೀಸರು ಆತನನ್ನು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಸಾದತ್ ಚಾಂದ್ ಸುಲ್ತಾನಾಳನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದು ಮಾತ್ರವಲ್ಲದೇ ಆಕೆಯ ಕುಟುಂಬದವರು ಮತ್ತೊಂದು ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು.
ಇದರಿಂದ ಸಾದತ್ ಆಕ್ರೋಶಗೊಂಡಿದ್ದ. ಸುಲ್ತಾನಾ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸಾದತ್ ಆಕೆಯನ್ನು ಮಾತನಾಡಬೇಕು ಎಂದು ನಡು ರಸ್ತೆಯಲ್ಲಿ ನಿಲ್ಲಿಸಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ.