
ಮದುವೆಗೆ ಪ್ರಿಯತಮೆ ಒಲ್ಲೆ ಎಂದಿದ್ದಕ್ಕೆ ಮನನೊಂದು ಭಗ್ನ ಪ್ರೇಮಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ ತಾನೂ ಕೂಡ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ನಗರದ ಟುಪ್ಲೇನ್ ನಿವಾಸಿ ಭಗ್ನಪ್ರೇಮಿ ವೆಂಕಟೇಶ್ (25) ಯುವತಿ ಯೊಬ್ಬಳನ್ನು ಪ್ರೀತಿಸಿದ್ದು, ಮದುವೆಗಾಗಿ ಯುವತಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರವಾಗಿ ಇಬ್ಬರಿಗೂ ಆಗಾಗ್ಗೆ ಜಗಳ ನಡೆಯುತ್ತಿತ್ತೆಂದು ಹೇಳಲಾಗಿದೆ.ನಗರದ ಮೂರನೇ ಕ್ರಾಸ್‍ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರೆನ್ನಲಾಗಿದ್ದು,
ಈ ಸಂದರ್ಭದಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ನಂತರ ಮದುವೆಯ ಹಂತಕ್ಕೆ ತಲುಪಿದ್ದರು. ಕಳೆದ ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ ಯುವತಿ ಚನ್ನಪಟ್ಟಣದ ಕೋಟೆಯಲ್ಲಿ ಪೋಷಕರ ಜತೆ ವಾಸವಾಗಿದ್ದಳು.
ಈ ವೇಳೆ ಯುವತಿ ಮನೆಗೆ ಹೋದ ವೆಂಕಟೇಶ್ ಆಕೆಯ ಜೊತೆ ಮಾತಿಗೆ ಮಾತು ಬೆಳೆಸಿ, ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಈಗ ಮದುವೆಗೆ ಒಪ್ಪದೆ ನನ್ನನ್ನು ತಿರಸ್ಕಾರ ಮಾಡಿದ್ದೀಯಾ ಎಂದು ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಈ ಇಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿದ್ದಾರೆ.
ತಕ್ಷಣ ಸ್ಥಳಕ್ಕೆ ಬಂದ ಪೋಲೀಸರು ಇವರನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.