ಪ್ರಿಯಕರನಿಗಾಗಿ ನದಿ ಈಜಿ ಬಾಂಗ್ಲಾ ಗಡಿ ದಾಟಿ ಬಂದ ಯುವತಿ

22 ವರ್ಷದ ಬಾಂಗ್ಲಾದೇಶದ ಯುವತಿಯೊಬ್ಬಳು ಭಾರತದಲ್ಲಿರುವ ತನ್ನ ಪ್ರಿಯಕರನನ್ನು ಮದುವೆಯಾಗಲು ಗಂಟೆಗಟ್ಟಲೇ ನದಿಯನ್ನು ಈಜಿಕೊಂಡು ಗಡಿ ದಾಟಿ ಬಂದಿದ್ದಾಳೆ. ಅವಳು ಸುಂದರ್‌ಬನ್ ಕಾಡುಗಳಲ್ಲಿರುವ ಮೃಗಗಳಿಗೂ ಹೆದರದೇ ಧೈರ್ಯದಿಂದ ನದಿ ದಾಟಿ ಬಂದಿದ್ದಾಳೆ. ಕೃಷ್ಣಾ ಮಂಡಲ್ ಎಂದು ಗುರುತಿಸಲಾದ ಬಾಂಗ್ಲಾದೇಶದ ಮಹಿಳೆಗೆ ಭಾರತದಲ್ಲಿರುವ ಯುವಕ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಾನೆ. ಬಳಿಕ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದೆ. ಈ ಯುವತಿ ಬಳಿ ಪಾಸ್‌ಪೋರ್ಟ್ ಇಲ್ಲದ ಕಾರಣ ಅಕ್ರಮವಾಗಿ ಗಡಿ ದಾಟಲು ನಿರ್ಧರಿಸಿದಳು.
ಪೊಲೀಸ್ ಮೂಲಗಳ ಪ್ರಕಾರ, ಕೃಷ್ಣಾ ಮಂಡಲ್ ಮೊದಲು ಪ್ರವೇಶಿಸಿದ್ದು ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಸುಂದರಬನ್ ಕಾಡಿಗೆ. ನಂತರ ತನ್ನ ಪ್ರಿಯಕರನ ಊರಿಗೆ ತಲುಪಲು ನದಿಯಲ್ಲಿ ಗಂಟೆಗಳ ಕಾಲ ಈಜಿದ್ದಾಳೆ.
ಮೂರು ದಿನಗಳ ಹಿಂದೆ ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಈ ಪ್ರೇಮಿಗಳಿಬ್ಬರು ಮದುವೆಯಾಗಿದ್ದಾರೆ. ಆದರೆ, ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಆಕೆಯನ್ನು ಸೋಮವಾರ ಬಂಧಿಸಲಾಯಿತು. ಕೃಷ್ಣಾ ಅವರನ್ನು ಬಾಂಗ್ಲಾದೇಶ ಹೈಕಮಿಷನ್‌ಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.