ಪ್ರಾಣ ಪಣಕ್ಕಿಟ್ಟು ಟವರಿ ಏರಿ ಕಾಗೆ ರಕ್ಷಿಸಿದ ಬೆಂಗಳೂರು ಪೊಲೀಸ್: ವೀಡಿಯೊ ವೈರಲ್!

ಬೆಂಗಳೂರಿನ ಸಂಚಾರಿ ಪೊಲೀಸ್ ಒಬ್ಬರು ಪ್ರಾಣವನ್ನು ಪಣಕ್ಕಿಟ್ಟು ಮೊಬೈಲ್ ಟವರ್ ಏರಿ ಸಿಕ್ಕಿಹಾಕಿಕೊಂಡಿದ್ದ ಕಾಗೆಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಚಾರಿ ಪೊಲೀಸರು ಅಂದರೆ ರಸ್ತೆ ಬದಿಯಲ್ಲಿ ನಿಂತು ಸವಾರರನ್ನು ಕಾಡುವುದೇ ಕೆಲಸ ಎಂಬ ಮಾತುಗಳು ಇವೆ. ಆದರೆ ಅವರಿಗೂ ಮಾವನೀಯತೆ ಇದೆ. ಕರ್ತವ್ಯ ಪ್ರಜ್ಞೆ ಎಂಬುದು ಕೆಲವು ಘಟನೆಗಳು ಸಾಕ್ಷಿಯಾಗುತ್ತವೆ. ಅದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.
ಬೆಂಗಳೂರಿನ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯ ಸುರೇಶ್ ಎಂಬುವವರು ಜೀವದ ಹಂಗು ತೊರೆದು ಮೊಬೈಲ್ ಟವರ್ ಏರಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಪಕ್ಷಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ತಮ್ಮ ಪ್ರಾಣವನ್ನು ಲೆಕ್ಕಿಸದೆ, ಪಕ್ಷಿಯ ಪ್ರಾಣವನ್ನು ಉಳಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯದ ವೀಡಿಯೊವನ್ನು ಬೆಂಗಳೂರಿನ ಪಶ್ಚಿಮ ಟ್ರಾಫಿಕ್ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇದೇ ವಿಡಿಯೋವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ‘ನಮ್ಮ ಸಂಚಾರ ಪೊಲೀಸರು ರಕ್ಷಣಾ ಕಾರ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದ್ದು, ಈ ವೀಡಿಯೊವನ್ನು 2.26 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ರಾಜಾಜಿನಗರದ ಟ್ರಾಫಿಕ್ ಪೊಲೀಸ್ ಸುರೇಶ್ ಅವರು, ಟವರ್‌ನಲ್ಲಿ ಸಿಲುಕಿದ್ದ ಕಾಗೆಯನ್ನು ಅತ್ಯಂತ ಕಾಳಜಿಯಿಂದ ರಕ್ಷಣೆ ಮಾಡಿದ್ದಾರೆ. ಅವರ ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು ಅಂದು ಬರೆದುಕೊಂಡಿದ್ದಾರೆ. ಅಲ್ಲದೇ ಮಾಜಿ ಸಚಿವ ಸುರೇಶ್ ಕುಮಾರ್ ಸಹ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸುರೇಶ್ ಅವರ ಧೈರ್ಯ ಮತ್ತು ನಿಸ್ವಾರ್ಥತೆಯನ್ನು ಶ್ಲಾಘಿಸಿದ್ದರೆ, ಇನ್ನೂ ಕೆಲವರು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಅಲ್ಲದೇ ಇದು ಅವರ ಕರ್ತವ್ಯವನ್ನು ಮೀರಿದೆ. ದಯವಿಟ್ಟು ಅವರಿಗೆ ಸೂಕ್ತ ಪ್ರಶಸ್ತಿ ನೀಡಿ ಗೌರವಿಸಿ ಎಂದು ಬರೆದುಕೊಂಡಿದ್ದಾರೆ.